ಮೈಸೂರು:
ಸಹಸ್ರಾರು ಮಹಿಳೆಯರ ಕಾತರ, ಸಂಭ್ರಮದ ನಡುವೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಗೆ ಅದ್ಧೂರಿ ಚಾಲನೆ ದೊರಕಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಶೇಷ ಅತಿಥಿ ರಾಹುಲ್ ಗಾಂಧಿ ದೀಪ ಬೆಳಗಿಸಿ ಉದ್ಘಾಟಿಸಿದ ಕೂಡಲೇ, ₹ 2 ಸಾವಿರ ಪಡೆಯಲಿರುವ ಯಜಮಾನಿ ಮಹಿಳೆಯರು, ಅವರ ಅಕ್ಕ-ತಂಗಿಯರು, ತಾಯಂದಿರು, ಮನೆಯ ಯಜಮಾನರು, ಸರ್ವ ಸದಸ್ಯರು ಹರ್ಷೋದ್ಗಾರ ಮಾಡಿದರು.
ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿದ್ದ ರಾಜ್ಯದ 12,600 ಸ್ಥಳಗಳಲ್ಲೂ ಸಂಭ್ರಮ ಮೇರೆ ಮೀರಿತ್ತು. ಉದ್ಘಾಟನೆಯಾಗುತ್ತಿದಂತೆ ವೇದಿಕೆಗೆ ಬಂದ ಅಷ್ಟಲಕ್ಷ್ಮಿಯರು ಹಾಗೂ ₹2 ಸಾವಿರ ಮೌಲ್ಯದ ಚೆಕ್ ಪ್ರತಿಕೃತಿಯು ಸನ್ನಿವೇಶವನ್ನು ಕಳೆಗಟ್ಟಿಸಿತ್ತು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟದ ಸದಸ್ಯರು, ಶಾಸಕರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ನಂತರ ಮಾತನಾಡಿದ ರಾಹುಲ್ ಗಾಂಧಿ, ‘ಚುನಾವಣೆಗೂ ಮುನ್ನ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿದಾಗ, ಇವೆಲ್ಲ ಅಸಾಧ್ಯ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದರು. ಕಾಂಗ್ರೆಸ್ ಸುಳ್ಳು ಹೇಳ್ತಿದೆ ಎಂದಿದ್ದರು. ಆದರೆ ಈಗ ಸತ್ಯ ನಿಮ್ಮ ಕಣ್ಣ ಮುಂದೆಯೇ ಇದೆ. ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಉಚಿತವಾಗಿ ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಶೀಘ್ರದಲ್ಲೇ ನಿರುದ್ಯೋಗಿಗಳಿಗಾಗಿ ಯುವನಿಧಿ ಕಾರ್ಯಕ್ರಮವೂ ಅನುಷ್ಠಾನಕ್ಕೆ ಬರಲಿದೆ’ ಎಂದರು.
‘ಗೃಹಲಕ್ಷ್ಮಿ ಯೋಜನೆಯು ವಿಶ್ವದಲ್ಲೇ ಅತ್ಯಂತ ದೊಡ್ಡ ಯೋಜನೆ. ಇಂಥ ಯೋಜನೆ ಬೇರೆಲ್ಲೂ ಇಲ್ಲ. ನಾವು ಕೊಡುವ ₹ 2 ಸಾವಿರ ಸಣ್ಣದಲ್ಲ. ಅದು ಮಹಿಳೆಗೆ ಸಂರಕ್ಷಣೆ ನೀಡುತ್ತದೆ. ಅದನ್ನು ಉಳಿಸಿ ಮಕ್ಕಳ ಶಿಕ್ಷಣಕ್ಕೆ ಬಳಸಬಹುದು. ರಾಜ್ಯದ ಮಹಿಳೆಯರೇ ರಾಜ್ಯದ ಏಳಿಗೆಗೆ ಕಾರಣ. 75 ವರ್ಷಗಳ ಅಭಿವೃದ್ಧಿ ನಿಮ್ಮಿಂದಲೇ ಆಗಿದೆ’ ಎಂದು ಬಣ್ಣಿಸಿದರು.
‘ಮುಕ್ತವಾಗಿ ನಮ್ಮೊಂದಿಗೆ ಮಾತಾಡಿ, ನಾವು ಸುಳ್ಳು ಆಶ್ವಾಸನೆ ಕೊಡಲ್ಲ. ಆಗುವುದಿಲ್ಲ ಎಂದರೆ ಅದನ್ನೇ ಹೇಳುತ್ತೇವೆ. ಸಾಧ್ಯವಾಗುವುದಾರೆ ಮಾಡಿಯೇ ತೀರುತ್ತೇವೆ’ ಎಂದರು.
‘ಇದು ನಮ್ಮ ಯೋಜನೆಯಲ್ಲ; ನಿಮ್ಮ ಯೋಜನೆ. ಕಾಂಗ್ರೆಸ್ ಪಕ್ಷದ ಥಿಂಕ್ ಟ್ಯಾಂಕ್ ಮಾಡಿದ್ದಲ್ಲ. ನೀವು ನಮಗೆ ಯೋಜನೆಯ ದಾರಿ ತೋರಿಸಿದಿರಿ’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
‘ಭಾರತ್ ಜೋಡೋ ಯಾತ್ರೆಯಲ್ಲಿ ಸಾವಿರಾರು ಮಹಿಳೆಯರನ್ನು ಭೇಟಿ ಮಾಡಿದ್ದೆ. ರಾಜ್ಯದಲ್ಲಿ 600 ಕಿಮೀ ನಡೆದಿದ್ದೆ. ಬೆಲೆ ಏರಿಕೆಯು ಮಹಿಳೆಯರ ಮೇಲೆ ಬರೆ ಹಾಕಿದೆ ಎಂದು ಆಗ ಅನ್ನಿಸಿತ್ತು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಎಲ್ಲದ್ದರ ಏಟು ಮಹಿಳೆಯರ ಮೇಲೇ ಬೀಳುತ್ತದೆ.
ಆ ಬಗ್ಗೆ ಮಹಿಳೆಯರು ನನಗೆ ಹೇಳಿದ್ದರು. ನಡೆಯುತ್ತಾ ನಡೆಯುತ್ತಾ, ಮಹಿಳೆಯರೇ ಈ ರಾಜ್ಯದ ಅಡಿಪಾಯ. ಅವರಿಲ್ಲದೆ ಈ ರಾಜ್ಯ ನಿಲ್ಲದು ಎಂಬುದು ಅರಿವಿಗೆ ಬಂದಿತ್ತು.
ಮರದ ಬೇರು ಕಾಣದ ರೀತಿಯಲ್ಲಿ, ಮನೆಯಲ್ಲೆ ಉಳಿದ ಮಹಿಳೆಯರು, ಯಾವುದೇ ಊರಾಗಿರಲಿ, ಇಡೀ ರಾಜ್ಯದ ಭದ್ರ ಬುನಾದಿ ನೀವೇ’ ಎಂದಾಗ ಮಹಿಳೆಯರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
‘ರಾಜ್ಯ ಸರ್ಕಾರ 100 ದಿನಗಳನ್ನು ಪೂರೈಸಿರುವ ಈ ಹೊತ್ತಿನಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ರಕ್ಷಾಬಂಧನದ ದಿನವಾದ ಇಂದು ನಾಡಿನ ಕೋಟ್ಯಂತರ ಅಕ್ಕ ತಂಗಿಯರಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೇವೆ’ ಎಂದರು.
‘ಕೇಂದ್ರ ಸರ್ಕಾರವು ಕೋಟ್ಯಧಿಪತಿಗಳಿಗಾಗಿ ಕೆಲಸ ಮಾಡುತ್ತಿದೆ. ಇಬ್ಬರು ಮೂವರಿಗಷ್ಟೇ ಅಭಿವೃದ್ಧಿಯ ಹೊಣೆ ನೀಡಲಾಗಿದೆ. ಆದರೆ ಕರ್ನಾಟಕದ ಐದು ಭರವಸೆಗಳು ಆಡಳಿತದ ನೀಲಿ ನಕ್ಷೆಯಾಗಿದೆ. ಬಡವರಿಗಾಗಿ ಸರ್ಕಾರಗಳು ಕೆಲಸ ಮಾಡಬೇಕು. ಜಾತಿ, ಧರ್ಮ ಮೀರಿ ನೆರವಾಗಬೇಕು. ರಾಜ್ಯದ ಯೋಜನೆಗಳನ್ನು ಇಡೀ ದೇಶದಲ್ಲಿ ಮಾದರಿಯಾಗಿ ಜಾರಿಗೆ ತರಲಾಗುವುದು. ಇವು ದೇಶಕ್ಕೆ ಸರಿಯಾದ ದಾರಿ ತೋರಿವೆ’ ಎಂದು ಹೇಳಿದರು.
ದೇಶ ಹಾಳು ಮಾಡುತ್ತಿದೆ ಬಿಜೆಪಿ: ಖರ್ಗೆ
‘ಬಿಜೆಪಿ ದೇಶ ಹಾಳು ಮಾಡುತ್ತಿದೆ. ಕೇಂದ್ರದಲ್ಲಿರುವ ಪ್ಯಾಸಿಸ್ಟ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
‘ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುತ್ತಿದ್ದರೆ ಬಿಜೆಪಿಯು ಭಾರತವನ್ನು ವಿಭಜಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದೆ. ದೇಶದಲ್ಲಿ ಯಾವ ಸರ್ಕಾರವೂ ಇಂಹತ ಗ್ಯಾರಂಟಿಗಳನ್ನು ಕೊಟ್ಟಿಲ್ಲ. ದೇಶದ ಎಲ್ಲರೂ ಇತ್ತ ನೋಡುತ್ತಿದ್ದಾರೆ’ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ಎಲ್ಲ ಭರವಸೆಗಳನ್ನೂ ಈಡೇರಿಸುವ ವಿಶ್ವಾಸವಿದೆ. ಸರ್ಕಾರದ ಯಾವುದೇ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುತ್ತಿದೆ. ಗ್ಯಾರಂಟಿಗಳಿಂದ ರಾಜ್ಯವೇನೂ ದಿವಾಳಿಯಾಗಿಲ್ಲ’ ಎಂದು ಹೇಳಿದರು.
ಕರ್ನಾಟಕ ಮಾದರಿ ರಾಜ್ಯ : ಸಿದ್ದರಾಮಯ್ಯ
ಚುನಾವಣಾ ಪ್ರಣಾಳಿಕೆಯನ್ನು ಸಮರ್ಪಕವಾಗಿ ಜಾರಿಮಾಡಬೇಕಿರುವುದು ಯಾವುದೇ ಸರ್ಕಾರದ ರಾಜಧರ್ಮ. ಅದರಂತೆ ನಮ್ಮ ಸರ್ಕಾರ ಗೃಹಲಕ್ಮೀ ಯೋಜನೆಯನ್ನು ಜಾರಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು .
ಈವರೆಗೆ ಕೊಟ್ಟ ಮಾತಿನಂತೆ ಯಾವ ಸರ್ಕಾರವೂ ನಡೆದುಕೊಂಡಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಸರ್ಕಾರ ಮುಂದಿನ 5 ವರ್ಷಗಳಲ್ಲಿ ಜನರಿಗೆ ನೀಡಿರುವ ಭರವಸೆಗಳನ್ನು ನೂರಕ್ಕೆ ನೂರು ಈಡೇರಿಸುವ ವಿಶ್ವಾಸ, ಭರವಸೆ ನಮಗಿದೆ. ಐದು ಗ್ಯಾರಂಟಿಗಳನ್ನು ನಾವು ಜನರ ಮುಂದಿಟ್ಟಿದ್ದೆವು. ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ, ನಾಲ್ಕನೇ ಗ್ಯಾರಂಟಿಯಾಗಿ ಗೃಹಲಕ್ಷ್ಮೀ ಯೋಜನೆಯನ್ನು ಇಂದು ಜಾರಿಮಾಡಲಾಗಿದೆ ಎಂದರು.
*ನೂರ ದಿನಗಳ ಸಾಧನೆ ಬಿಂಬಿಸುವ ಕಿರುಹೊತ್ತಿಗೆ*
ಈ ತಿಂಗಳ 27 ನೇ ತಾರೀಖೆಗೆ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಜನತೆಯ ಮುಂದೆ ಸರ್ಕಾರದ ಸಾಧನೆಗಳನ್ನು ತಿಳಿಸಲು ಸಣ್ಣ ಕೈಪಿಡಿ ಹೊರತರಲಾಗಿದೆ. ಈ ಕಿರುಹೊತ್ತಿಗೆ ಕಳೆದ ಮೂರು ತಿಂಗಳು, 10 ದಿನಗಳಲ್ಲಿ ಮಾಡಿರುವ ಸಾಧನೆಗಳನ್ನು ಒಳಗೊಂಡಿದೆ. ಈ ರಾಜ್ಯದ ಜನತೆಗೆ ನಮ್ಮ ಕರ್ತವ್ಯ ಜವಾಬ್ದಾರಿ ಹಾಗೂ ಸಾಧನೆಗಳನ್ನು ಮುಂದಿಡುವ ಪ್ರಯತ್ನ ಮಾಡಿದೆ ಎಂದರು.
*ಬೃಹತ್ ಪ್ರಮಾಣದಲ್ಲಿ ಬಡವರಿಗೆ ಹಣ ವರ್ಗಾವಣೆ*
ಕರ್ನಾಟಕದಲ್ಲಿ 1.26 ಕೋಟಿ ಕುಟುಂಬಗಳಿವೆ. ಆ ಕುಟುಂಬಗಳ ಯಜಮಾನಿಯಾರಿಗೆ 2000 ರೂ.ಗಳನ್ನು ಅವರ ಖಾತೆಗೆ ಇಂದು ಜಮಾ ಮಾಡಲಾಗಿದೆ. ಈ ಯೋಜನೆಗೆ 1.10 ಕೋಟಿ ಜನ ನೋಂದಾಯಿಸಿಕೊಂಡಿದ್ದಾರೆ. ಇಡೀ ಭಾರತದಲ್ಲಿ ಯಾವ ರಾಜ್ಯವೂ ತೊಂದರೆಯಲ್ಲಿರುವ ಜನರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಂದರೆ ವರ್ಷಕ್ಕೆ 24 ಸಾವಿರ ಹಣವನ್ನು ಬಡವರಿಗೆ ವರ್ಗಾಯಿಸಿಲ್ಲ ಎನ್ನುವುದು ಕಟುಸತ್ಯ. ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, 48,500 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಕಾರ್ಯಕ್ರಮವನ್ನು ಜುಲೈ 10 ರಂದು ಜಾರಿಗೆ ತಂದೆವು. ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡದೇ ಹೋದರೂ ನಾವು 170 ರೂ.ಗಳನ್ನು ಅಕ್ಕಿ ಸಿಗುವವರೆಗೂ ಪ್ರತಿ ಬಿಪಿಎಲ್, ಅಂತ್ಯೋದಯ ಕಾರ್ಡುದಾರರ ಖಾತೆಗೆ ಜಮಾ ಮಾಡಿದ್ದೇವೆ ಎಂದರು.
*ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ*
ಜುಲೈ ತಿಂಗಳಿಂದ ಗೃಹಜ್ಯೋತಿ ಕಾರ್ಯಕ್ರಮದಡಿ 200 ಯೂನಿಟ್ವರೆಗೆ ವಿದ್ಯುತ್ ಬಳಸುವವರಿಗೆಲ್ಲಾ ಉಚಿತ ವಿದ್ಯುತ್ ಒದಗಿಸಿ ಶೂನ್ಯ ಬಿಲ್ ನೀಡುತ್ತಿದ್ದೇವೆ. ಈ ಯೋಜನೆಗೆ 1.56 ಕೋಟಿ ಜನ ನೋಂದಾಯಿಸಿಕೊಂಡಿದ್ದಾರೆ. ಪ್ರಧಾನಿಗಳೇ ಈ 5 ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹೇಳಿದ್ದರು. ಆದರೆ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿದೆ. ಯುವನಿಧಿಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಪ್ರಾರಂಭವಾಗಲಿದೆ. ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಜಾರಿ ಮಾಡಿ, ನೀರಾವರಿ, ಲೋಕೋಪಯೋಗಿ, ವಸತಿ, ಗ್ರಾಮಿಣಾಭಿವೃದ್ಧಿಗೆ ಅನುದಾನವಿಟ್ಟು 5 ಗ್ಯಾರಂಟಿಗಳನ್ನು ಜಾರಿ ಮಾಡಿದೆ. 56 ಸಾವಿರ ಕೋಟಿ ರೂ.ಗಳು ಒಂದು ವರ್ಷಕ್ಕೆ ತಗಲುತ್ತದೆ. ನಮ್ಮದು ಬಡವರ , ದಲಿತರ, ಹಿಂದುಳಿದ, ಅಲ್ಪಸಂಖ್ಯಾತರ ರೈತರ, ಕಾರ್ಮಿಕರ, ಯುವಕರ ಪರವಾದ ಸರ್ಕಾರ ಎಂದು ಸಾಬೀತು ಮಾಡಲಾಗಿದೆ. ಯಾರು ಏನೇ ಹೇಳಿದರೂ ನಾನು ನುಡಿದಂತೆ ನಡೆದಿದ್ದೇವೆ. ವಿರೋಧ ಪಕ್ಷದವರು ಹೇಳಿರುವುದು ಸುಳ್ಳು ಎಂದರು. ರಾಜ್ಯದಲ್ಲಿ ಐತಿಹಾಸಿಕ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಲಾಯಿತು.
ನೂರು ದಿನಗಳಲ್ಲಿ ಸರ್ಕಾರದ ಸಾಧನೆಯನ್ನು ಬಿಂಬಿಸುವ ಕರ್ನಾಟಕ ಮಾದರಿ ಪುಸಕ್ತವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಬಳಿಕ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು, ದೇಶದ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.
ಸಚಿವರಾದ ಎನ್.ಎಸ್.ಬೋಸರಾಜು, ಎನ್.ಚಲುವರಾಯಸ್ವಾಮಿ, ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಡಾ.ಎಚ್.ಸಿ.ಮಹದೇವಪ್ಪ, ಎನ್.ರಾಜಣ್ಣ, ಕೆ.ವೆಂಕಟೇಶ್, ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ,
ಶಾಸಕರಾದ ತನ್ವೀರ್ ಸೇಟ್, ಎನ್.ನರೇಂದ್ರಸ್ವಾಮಿ, ಡಾ.ತಿಮ್ಮಯ್ಯ, ಎ.ಎಚ್.ವಿಶ್ವನಾಥ್, ದರ್ಶನ್ ಪುಟ್ಟಣ್ಣಯ್ಯ, ಶರತ್ ಬಚ್ಚೇಗೌಡ, ದರ್ಶನ್ ಧ್ರುವನಾರಾಯಣ, ಎ.ಎಸ್.ಪೊನ್ನಣ್ಣ, ಡಿ.ರವಿಶಂಕರ್, ಕೆ.ಹರೀಶ್ ಗೌಡ, ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಇದ್ದರು.
ರಸ್ತ ಬದಿ ಕುಳಿತರು; ಮಂಡ್ಯ, ಚಾಮರಾಜನಗರ, ಹಾಸನ, ಕೊಡಗಿನಿಂದ ಸರ್ಕಾರಿ ಬಸ್ಗಳಲ್ಲಿ ಕರೆತಂದಿದ್ದ ಮಹಿಳೆಯರಲ್ಲಿ ನೂರಾರು ಮಂದಿಗೆ ವೇದಿಕೆ ಮುಂಭಾಗ ಸ್ಥಳಾವಕಾಶ ಸಿಗದೇ, ಮೈದಾನದ ಹೊರ ಆವರಣದ ರಸ್ತೆ ಬದಿ ಮರಗಳಡಿ ಕುಳಿತುಕೊಂಡೇ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.