ಬೆಂಗಳೂರು :
ತೀವ್ರ ಜ್ವರ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು, ಬುಧವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಏಕಾಏಕಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಈಗಾಗಲೇ ಲೋಕಸಭಾ ಚುನಾವಣೆ ಹಿನ್ನಲೆ ಪಕ್ಷದ ಕಚೇರಿಯಲ್ಲಿ ಸರಣಿ ಸಭೆ ನಡೆಸಿದ್ದ ಕುಮಾರಸ್ವಾಮಿ ಅವರು, ಇಂದು ಕೋಲಾರದ ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ವೇಳೆ ರೈತರ ಬೆಳೆ ನಾಶಪಡಿಸಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ರೈತರೊಂದಿಗೆ ಮಾತನಾಡಲು ಅವರು ಕೋಲಾರ ಪ್ರವಾಸವನ್ನ ಕೈಗೊಂಡಿದ್ದರು. ಆದರೆ, ಆರೋಗ್ಯದಲ್ಲಿ ಏಕಾಏಕಿ ಏರುಪೇರಾದ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದು, ಕೋಲಾರ ಪ್ರವಾಸ ರದ್ದಾಗಿದೆ.
ಇನ್ನೂ 2023 ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಸಹ ಪಕ್ಷದ ಪರ ರಾಜ್ಯಾದ್ಯಂತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ವೇಳೆಯೂ ಅವರು ಜ್ವರ ಕಾಣಿಸಿಕೊಂಡ ನಂತರ ಕುಮಾರಸ್ವಾಮಿಯವರು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಚುನಾವಣಾ ಫಲಿತಾಂಶದ ನಂತರ ವಿಶ್ರಾಂತಿಗಾಗಿ ವಿದೇಶಿ ಪ್ರವಾಸಕ್ಕೆ ಕುಟುಂಬದವರೊಂದಿಗೆ ಕುಮಾರಸ್ವಾಮಿ ತೆರಳಿದ್ದರು.