ಕುಮಟಾ :
ಇಲ್ಲಿಗೆ ಸಮೀಪದ ಹೆಗಡೆ ಗ್ರಾಮದ ಗಾಂಧಿ ನಗರದ ಮನೆಯಂಗಳದಲ್ಲಿ ಬಿಳಿ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ರಕ್ಷಣೆ ಮಾಡಲಾಗಿದೆ.
ಆರ್ ಟಿ ಒ ಕಚೇರಿ ಹೋಮ್ ಗಾರ್ಡ್ ಗಣೇಶ ಮುಕ್ರಿ ಅವರ ಮನೆಯ ಅಂಗಳದಲ್ಲಿ ಕಾಣಿಸಕೊಂಡ ಹೆಬ್ಬಾವನ್ನು ಪವನ್ ನಾಯ್ಕ ರಕ್ಷಣೆ ಮಾಡಿದ್ದಾರೆ. ಗಣೇಶ ಮುಕ್ರಿ ಅವರು ಉರಗ ತಜ್ಞ ಪವನ್ ನಾಯ್ಕ ಅವರಿಗೆ ಮಾಹಿತಿ ನೀಡಿದ್ದಾರೆ. ರಾತ್ರಿ 12 ಗಂಟೆಗೆ ಸ್ಥಳಕ್ಕೆ ತೆರಳಿದ ಪವನ್ ನಾಯ್ಕ ರಕ್ಷಣೆ ಮಾಡಿದ್ದಾರೆ.
ಕಳೆದ ವರ್ಷವಷ್ಟೇ ಮಿರ್ಜಾನ್ ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿಕೊಂಡಿದ್ದು ರಾತ್ರಿ ವೇಳೆ ಪವನ್ ನಾಯ್ಕ ಹೋಗಿ ರಕ್ಷಣೆ ಮಾಡಿದ್ದರು.
ಈಗ ಬಹುತೇಕ ಅದರ ಮೂರು ಪಟ್ಟು ದೊಡ್ಡ ಗಾತ್ರದ ಬಿಳಿ ಹೆಬ್ಬಾವನ್ನು ಹೆಗಡೆಯಲ್ಲಿ ರಕ್ಷಣೆ ಮಾಡಿದ್ದಾರೆ.
ಇಂತಹ ಬಿಳಿ ಹೆಬ್ಬಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆ ಮಾಡಲಾಗಿದ್ದು, ಅದರಲ್ಲಿ ಎರಡು ಸಲ ಕುಮಟಾ ತಾಲೂಕಿನಲ್ಲೇ ಅದು ಕಂಡುಬಂದಿದ್ದು ವಿಶೇಷವಾಗಿದೆ.
ರಾತ್ರಿಯಾಗಿದ್ದರಿಂದ ಮಂಗಳವಾರ ಬೆಳಿಗ್ಗೆ ಕುಮಟಾ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದ್ದು. ಮೈಮೇಲೆ ಸಣ್ಣ ಪುಟ್ಡ ಗಾಯಗಳಿರುವುದರಿಂದ ಮೈಸೂರು ಮೃಗಾಲಯಕ್ಕೆ ಕಳುಹಿಸಲಾಗಿದೆ. ಡಿಎಫ್ ಒ ರವಿಶಂಕರ್, ಎಸಿಎಫ್ ಜಿ ಲೋಹಿತ, ಆರ್ ಎಫ್ ಒ ಎಸ್ ಟಿ ಪಟಗಾರ, ಡಿ ಆರ್ ಎಫ್ ಒ ಹೂವಣ್ಣ ಗೌಡ ಸ್ಥಳದಲ್ಲಿದ್ದರು. ಹಾವಿನ ಛಾಯಾಗ್ರಹಣವನ್ನು ಪ್ರಸಿದ್ದ ಛಾಯಾಗ್ರಾಹಕ ಗೋಪಿ ಜೋಲಿ ಅವರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಕಳೆದ ವರ್ಷವೂ ಪತ್ತೆ :
ಕಳೆದ ವರ್ಷದ ಆಗಸ್ಟ್ ನಲ್ಲಿ ಅಪರೂಪದ ಬಿಳಿ ಹೆಬ್ಬಾವೊಂದು ಕುಮಟಾ ತಾಲ್ಲೂಕಿನ ಮಿರ್ಜಾನ ಬಳಿಯ ರಾಮನಗರದಲ್ಲಿ ಮನೆಯೊಂದ ಬಳಿ ಕಂಡುಬಂದಿತ್ತು. ಅದನ್ನು ಉರಗ ತಜ್ಞರು ಹಿಡಿದು ಕಾಡಿಗೆ ಬಿಟ್ಟಿದ್ದರು.
ಸುಬ್ರಹ್ಮಣ್ಯ ನಾಯ್ಕ ಅವರ ಮನೆಯ ಬಳಿ ಇದ್ದ ಹಾವನ್ನು ಯಾವ ಪ್ರಭೇದದ್ದು ಎಂದು ಗುರುತಿಸಲಾಗದೇ ಸ್ಥಳೀಯರು ಗೊಂದಲಕ್ಕೀಡಾಗಿದ್ದರು. ವಿಷಯ ತಿಳಿದ ಉರಗ ತಜ್ಞ ಪವನ್ ಎಂ.ನಾಯ್ಕ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಬಿಳಿ ಹೆಬ್ಬಾವು ಎಂದು ಖಾತ್ರಿಪಡಿಸಿದರು.
ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ನ ಕೊರತೆಯಿಂದ ಹಾವುಗಳ ಬಣ್ಣ ಬಿಳಿಯಾಗುತ್ತದೆ. ಇಂಥ ಹಾವುಗಳನ್ನು ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ. ಆದರೆ, ಅಲ್ಬಿನೋ ಹಾವುಗಳಾದರೆ ಕಣ್ಣು ಸಹ ಕೆಂಪು ಮಿಶ್ರಿತ ಬಿಳಿ ಬಣ್ಣ ಇರುತ್ತದೆ. ಇದರ ಕಣ್ಣು ಅರ್ಧ ಮಾತ್ರ ಬಿಳಿ ಇದ್ದು ಇನ್ನರ್ಧ ಕಪ್ಪಾಗಿದೆ. ಹಾಗಾಗಿ ಆ ಗುಂಪಿಗೆ ಸೇರಿಸಲು ಸಾಧ್ಯವಿಲ್ಲ. ಹಾವನ್ನು ಸುರಕ್ಷಿತ ಪ್ರದೇಶಕ್ಕೆ ಬಿಡಲಾಗಿತ್ತು.