ಬೆಳಗಾವಿ :
ಚಿಕ್ಕೋಡಿ ತಾಲೂಕು ಹಿರೇಕೋಡಿ ಗ್ರಾಮದಲ್ಲಿ ಕಲುಷಿತ ಆಹಾರ ಸೇವಿಸಿ ನೂರಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರದಂದು ಪಟೇಲ ಎಂಬುವವರ ಮನೆಯಲ್ಲಿ ಮದುವೆ ನಡೆದಿದ್ದು ಅಲ್ಲಿ ನಡೆದ ಊಟ ಸೇವಿಸಿ ಜನ ವಾಂತಿಭೇದಿಯಿಂದ ತತ್ತರಿಸಿ ಮಂಗಳವಾರ ಅಸ್ವಸ್ಥಗೊಂಡಿದ್ದಾರೆ, ಈ ಹಿನ್ನೆಲೆಯಲ್ಲಿ ಎಲ್ಲರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಯಾವಾಗ ?
ಚಿಕ್ಕೋಡಿಯ ಹಿರೇಕೋಡಿ ಹೊರವಲಯದಲ್ಲಿ ನಡೆದ ಪಟೇಲ್ ಕುಟುಂಬದ ಮದುವೆ ಸಮಾರಂಭದಲ್ಲಿ ಊಟ ಸೇವಿಸಿದ 100ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ನಡೆದಿದೆ.
ಇನ್ನೂ ಈ ಮದುವೆ ಸಮಾರಂಭಕ್ಕೆ ಮಹಾರಾಷ್ಟ್ರದ ಮಿರಜ್ನಿಂದಲೂ ಸಂಬಂಧಿಕರು ಆಗಮಿಸಿದ್ದರು ಎನ್ನಲಾಗಿದೆ.
ಮದುವೆ ಸಮಾರಂಭದಲ್ಲಿ ಊಟ ಮಾಡಿ ಮನೆಗೆ ವಾಪಾಸ್ ಆಗುತ್ತಿದ್ದಂತೆ ಕೆಲ ಜನರಿಗೆ ವಾಂತಿ-ಭೇದಿಯಾಗಿದೆ.
ತಡರಾತ್ರಿ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದ್ದು ಅನೇಕರು ರಾತ್ರಿಯೇ ತಮ್ಮ ಗ್ರಾಮದ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಹಿರೇಕೋಡಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು ಸರ್ಕಾರಿ ಶಾಲೆಯಲ್ಲಿ ಬೀಡುಬಿಟ್ಟು ತಪಾಸಣೆ ನಡೆಸುತ್ತಿದ್ದಾರೆ