ವಾರಣಾಸಿ :
ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುತ್ತಾ ಬಂದಿರುವ ವಾರಣಾಸಿ ಲೋಕಸಭಾ ಮತಕ್ಷೇತ್ರದಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುತ್ತಾರಾ ಎಂಬ ಚರ್ಚೆ ಈಗ ಜೋರಾಗಿದೆ.
ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ರಾವ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರಿಯಾಂಕಾ ವಾದ್ರಾ ಅವರಿಗೆ ಈ ಬಗ್ಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯು ವಾರಣಾಸಿಯಿಂದ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಣಕ್ಕಿಳಿಸಲು ಉತ್ಸುಕವಾಗಿದೆ ಮತ್ತು ಶೀಘ್ರದಲ್ಲೇ ಈ ಬಗ್ಗೆ ಉನ್ನತ ನಾಯಕತ್ವಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗುತ್ತದೆ.
ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯು ವಾರಣಾಸಿಯಿಂದ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಣಕ್ಕಿಳಿಸಲು ಉತ್ಸುಕವಾಗಿದೆ ಮತ್ತು ಶೀಘ್ರದಲ್ಲೇ ಈ ಬಗ್ಗೆ ಉನ್ನತ ನಾಯಕತ್ವಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಿದೆ ಎಂದು ಪಕ್ಷದ ನೂತನ ರಾಜ್ಯಾಧ್ಯಕ್ಷ ಅಜಯ್ ರಾಯ್ ಭಾನುವಾರ ಹೇಳಿದ್ದಾರೆ.
ಅಜಯ್ ರೈ ಅವರು ವಾರಣಾಸಿಯಲ್ಲಿ ಕಳೆದ ಮೂರು ಬಾರಿ ಕಾಂಗ್ರೆಸ್ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. 2009ರಲ್ಲಿ ಮುರಳಿ ಮನೋಹರ್ ಜೋಶಿ ವಿರುದ್ಧ ಸೋತರೆ, 2014 ಮತ್ತು 2019 ರಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದಾರೆ.
“ಪ್ರಿಯಾಂಕಾ ಗಾಂಧಿ ಅವರು ವಾರಣಾಸಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ನಾವು ಬಯಸುತ್ತೇವೆ. ಇದಕ್ಕಾಗಿ ನಾವು ಶೀಘ್ರದಲ್ಲೇ ಪಕ್ಷದ ನಾಯಕತ್ವಕ್ಕೆ ಪ್ರಸ್ತಾವನೆಯನ್ನು ಕಳುಹಿಸುತ್ತೇವೆ” ಎಂದು ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರು ಪಿಟಿಐಗೆ ತಿಳಿಸಿರುವುದಾಗಿ ವರದಿಯಾಗಿದೆ.
“ಪ್ರಿಯಾಂಕಾ ಗಾಂಧಿ ಅವರು ಬಯಸಿದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಹುದು, ಮತ್ತು ನಾವು ಅವರನ್ನು ಚುನಾವಣೆಯಲ್ಲಿ ಗೆಲ್ಲುವಂತೆ ಮಾಡುತ್ತೇವೆ, ಆದರೆ ಅವರು ವಾರಣಾಸಿಯಿಂದ ಸ್ಪರ್ಧಿಸಬೇಕೆಂದು ನಾವು ಬಯಸುತ್ತೇವೆ” ಎಂದು ಅವರು ಹೇಳಿದ್ದಾರೆ.
ವಾರಣಾಸಿ ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಚುನಾವಣಾ ಕ್ಷೇತ್ರವಾಗಿದೆ. 2019ರಲ್ಲಿ ಸತತ ಎರಡನೇ ಬಾರಿಗೆ ವಾರಣಾಸಿಯಿಂದ ಮೋದಿ ಆಯ್ಕೆಯಾಗಿದ್ದು, 2024ರಲ್ಲಿಯೂ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.
ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಯಾವ ಸಂದೇಶವನ್ನು ಕಳುಹಿಸಲು ಬಯಸುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಮೋದಿ ವಿರುದ್ಧ ಕಾಂಗ್ರೆಸ್ ಪ್ರಬಲವಾಗಿದೆ” ಎನ್ನುವ ಸಂದೇಶ ನೀಡಲು ಯತ್ನಿಸುತ್ತಿರುವುದಾಗಿ ಹೇಳಿದರು.
ವಾರಣಾಸಿ ಲೋಕಸಭಾ ಕ್ಷೇತ್ರವು 1991 ರಿಂದ ಬಿಜೆಪಿ ಭದ್ರಕೋಟೆಯಾಗಿದೆ, 2004 ರಲ್ಲಿ ಒಮ್ಮೆ ಮಾತ್ರ ಕಾಂಗ್ರೆಸ್ ಗೆದ್ದಿದೆ. 1991, 1996, 1998 ಮತ್ತು 1999 ರ ಲೋಕಸಭಾ ಚುನಾವಣೆಗಳಲ್ಲಿ ಮತ್ತು ಮಧ್ಯಂತರ ಚುನಾವಣೆಯಲ್ಲಿ ಸಹ ಈ ಸ್ಥಾನವು ಬಿಜೆಪಿಯ ಬಳಿ ಉಳಿಯಿತು.
2004ರಲ್ಲಿ ಕಾಂಗ್ರೆಸ್ನ ರಾಜೇಶ್ ಕುಮಾರ್ ಮಿಶ್ರಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು, ಆದರೆ 2009ರಲ್ಲಿ ಬಿಜೆಪಿ ಮತ್ತೆ ಗೆಲುವು ಸಾಧಿಸಿತ್ತು. ವಾರಾಣಸಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 2014 ಮತ್ತು 2019 ರ ಚುನಾವಣೆಯಲ್ಲಿ ಮೋದಿ ವಿರುದ್ಧ ಅಜಯ್ ರೈ ಕಣಕ್ಕಿಳಿದಿದ್ದರು ಮತ್ತು 75,614 ಮತಗಳು ಮತ್ತು 1,52,548 ಮತಗಳನ್ನು ಪಡೆದರು.
ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸುವ ಸಾಧ್ಯತೆಯ ಕುರಿತು ಮಾತನಾಡಿದ ಅವರು, ಅಮೇಥಿಯ ಜನರು ಈ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ, ಬಿಜೆಪಿ ಸಂಸದೆ ಸ್ಮೃತಿ ಇರಾನಿ ಮತ್ತು ಅವರ ಕಾರ್ಯವೈಖರಿ ಮತ್ತು ಈಡೇರದ ಭರವಸೆಗಳಿಂದ ಸಾರ್ವಜನಿಕರು ಕೋಪಗೊಂಡಿದ್ದಾರೆ. ಮತ್ತೆ ರಾಹುಲ್ ಗಾಂಧಿ ಬೇಕೆನ್ನುವ ವಾತಾವರಣ ಇದೆ ಎಂದು ಹೇಳಿದರು.
ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡಿನಿಂದ ಸ್ಪರ್ಧಿಸಿದ್ದರು. ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋಲನುಭವಿಸಿದ್ದರು.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಶೀಘ್ರದಲ್ಲೇ ರಾಜ್ಯ ರಾಜಕೀಯದಲ್ಲಿದಲ್ಲಿ ಹೆಚ್ಚು ಸಕ್ರಿಯರಾಗುತ್ತಾರೆ ಎಂದು ರೈ ಹೇಳಿದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮೂರು ದಶಕಗಳಿಗೂ ಹೆಚ್ಚು ಕಾಲ ಅಧಿಕಾರದಿಂದ ದೂರವಿತ್ತು. 1985 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿದೆ.