ಬೆಳಗಾವಿ :
ಗೋಕಾಕ ತಾಲೂಕಿನ ಪ್ರಸಿದ್ಧ ಕೊಣ್ಣೂರು ಶ್ರೀ ಲಕ್ಷ್ಮೀದೇವಿಯ ಶೃಂಗಾರಕ್ಕೆ ಬಳಕೆಯಾಗುವ ಬಂಗಾರಕ್ಕಾಗಿ ಇದೀಗ ಅರ್ಚಕರು ಮತ್ತು ದೇವಸ್ಥಾನದ ಕಮಿಟಿ ನಡುವೆ ತೀವ್ರ ಜಟಾಪಟಿ ನಡೆದಿದೆ. ಅರ್ಚಕರು ಪೂಜೆಗೆ ಮಾತ್ರ ಸೀಮಿತ, ಅವರಿಗೇಕೆ ಬಂಗಾರ ಎನ್ನುವುದು ದೇವಸ್ಥಾನದ ಆಡಳಿತ ಕಮಿಟಿಯವರ ವಾದವಾಗಿದೆ.
ದೇವಸ್ಥಾನಕ್ಕೆ ಇಷ್ಟೊಂದು ಬಂಗಾರ ಬರಬೇಕಾದರೆ ಅದಕ್ಕೆ ನಾವೇ ಕಾರಣ. ದೇವರಿಗೆ ಶೃಂಗಾರ ಮಾಡುವ ಬಂಗಾರ ನಮ್ಮ ಬಳಿಯೇ ಇರಬೇಕು ಎನ್ನುವ ವಾದ ಅರ್ಚಕರದ್ದು.
ಈ ನಡುವೆ ತಹಸೀಲ್ದಾರ್ ಅವರು ಅರ್ಚಕರು ಹಾಗೂ ಕಮಿಟಿಯವರ ಮಧ್ಯೆ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ. ಗೋಕಾಕ ತಹಸೀಲ್ದಾರ ಕೆ.ಮಂಜುನಾಥ ಅವರು ಸಂಧಾನ ನಡೆಸಿದ್ದಾರೆ. ಆದರೂ ಫಲ ಕೊಟ್ಟಿಲ್ಲ.
ಇದು ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನವಾಗಿದೆ. ಈ ಭಾಗದ ಭಕ್ತರ ಪಾಲಿಗೆ ಇದೊಂದು ಅತ್ಯಂತ ಶ್ರದ್ಧಾ ಭಕ್ತಿಯ ತಾಣವಾಗಿದೆ. ಆದರೆ, ಅರ್ಚಕರು ಹಾಗೂ ಆಡಳಿತ ಕಮಿಟಿಯ ನಡುವೆ ಸೀಮಿತವಾಗಿದ್ದ ಈ ವಿವಾದ ಈಗ ಸಾರ್ವಜನಿಕವಾಗಿ ಬಹಿರಂಗಗೊಂಡ ಕಾರಣ ಜೊತೆಗೆ ಸಂಧಾನವು ಸಹಾ ವಿಫಲವಾಗಿದ್ದರಿಂದ ದೇವಿಗೆ ಹಾಕುವ ಬಂಗಾರ ಸರ್ಕಾರದ ಸುಪರ್ದಿಗೆ ಬಂದಿದೆ.
ದೇವಿಯ ಆಭರಣಗಳನ್ನು ಲೆಕ್ಕ ಹಾಕಿರುವ ಅಧಿಕಾರಿಗಳು ಸರಕಾರದ ಸುಪರ್ದಿಗೆ ಬಂಗಾರವನ್ನು ನೀಡಿದ್ದಾರೆ. ಒಟ್ಟು ಬಂಗಾರ 563 ಗ್ರಾಂ, 12 ಕೆಜಿ 300 ಗ್ರಾಂ ಬೆಳ್ಳಿಯನ್ನು ಸಹ ಸರಕಾರದ ವಶಕ್ಕೆ ನೀಡಲಾಗಿದೆ.