ಮಡಿಕೇರಿ :
ನಾಯಿಗಳನ್ನು ಸಾಕುವ ಮನೆಯ ಮಾಲೀಕರಿಗೆ ಕೊಡಗು ಜಿಲ್ಲಾ ಪೊಲೀಸರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಸಾಕು ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ ಅದರ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪೊಲೀಸರು, ಮನೆಯಲ್ಲಿ ನಾಯಿಗಳನ್ನು ಎಚ್ಚರಿಕೆಯಿಂದ ಸಾಕದೆ ಮನೆಗೆ ಬರುವವರ ಮೇಲೆ ದಾಳಿ ನಡೆಸಿದರೆ ಮಾಲೀಕರ ವಿರುದ್ಧ ಸೆಕ್ಷನ್ 289 ಐಪಿಸಿ ಅನ್ವಯ ಪ್ರಕರಣ ದಾಖಲಿಸಲಾಗುತ್ತದೆ. ಮಾಲೀಕರಿಗೆ 6 ತಿಂಗಳು ಜೈಲುವಾಸ ಹಾಗೂ ದಂಡವನ್ನು ವಿಧಿಸಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆ ಹೇಳಿದೆ.
ಕೊಡಗು ಜಿಲ್ಲೆಯ ನಾಪೊಕ್ಲು ಪೊಲೀಸ್ ಠಾಣೆ ವ್ಯಾಪ್ತಿಯ ಪಾರಾಣೆ ಗ್ರಾಮದ ನಿವಾಸಿ ಬೆಳತಂಡ ಮಾಚಯ್ಯ ಅವರ ಮನೆಗೆ ಮಗುವಿನ ಆರೋಗ್ಯ ತಪಾಸಣೆಗೆಂದು ಬಂದಿದ್ದ ಸಮುದಾಯ ಆರೋಗ್ಯ ಅಧಿಕಾರಿಗೆ ಸಾಕುನಾಯಿ ಕಚ್ಚಿತ್ತು. ಕೆ. ಕೆ. ಭವ್ಯ ಅವರಿಗೆ ಹಲವು ಭಾಗಗಳಿಗೆ ಕಚ್ಚಿ ಗಾಯಗೊಳಿಸಿದ ನಂತರ ಮಾಚಯ್ಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ಹಿನ್ನೆಲೆಯಲ್ಲಿ ಕೊಡಗು ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ.