ಬೆಳಗಾವಿ :ಬೆಳಗಾವಿ ಮಹಾನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಪಣತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರು ದಿನ ಬೆಳಗಾದರೆ ಬೆಳಗಾವಿ ಮಹಾನಗರ ವ್ಯಾಪ್ತಿಯಲ್ಲೆಡೆ ಸ್ವತಃ ಕಾರ್ಯಾಚರಣೆ ನಡೆಸುತ್ತಿರುವುದು ಈಗ ನಿತ್ಯ ನೂತನವಾಗಿದೆ.
ಆಯುಕ್ತರ ನಿತ್ಯ ಸಂಚಾರದ ಫಲವಾಗಿ ಇದೀಗ ಬೆಳಗಾವಿ ದಿನೇ ದಿನೇ ಕಂಗೊಳಿಸಲು ಪ್ರಾರಂಭವಾಗಿದೆ. ದಿನಗಟ್ಟಲೆ ಕಸ ವಿಲೇವಾರಿ ಮಾಡದೆ ಹಾಗೆ ಬಿಟ್ಟಿರುತ್ತಿದ್ದ ಕೆಲ ಬಡಾವಣೆಗಳು ಇದೀಗ ಸ್ವಚ್ಛ ಹಾಗೂ ಸುಂದರವಾಗಿ ಕಂಡುಬರುತ್ತವೆ. ಜಿಡ್ಡುಗಟ್ಟಿದ್ದ ಪಾಲಿಕೆ ಆಡಳಿತಕ್ಕೆ ನವ ಚೈತನ್ಯ ತಂದು ಕೊಡುವ ನಿಟ್ಟಿನಲ್ಲಿ ಆಯುಕ್ತರು ಕಾಳಜಿ ವಹಿಸಿದ್ದು ಅವರ ಕಳಕಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಯಾವಾಗಲೋ ಬಂದು ಹಾಜರಿ ಹಾಕಿ ಹೋಗುತ್ತಿದ್ದ ಕಾರ್ಮಿಕರು ಇದೀಗ ಸಮಯಕ್ಕೆ ಸರಿಯಾಗಿ ಬಯೋಮೆಟ್ರಿಕ್ ಪದ್ಧತಿ ಮೂಲಕ ಹಾಜರಿ ಹಾಕುತ್ತಿದ್ದಾರೆ. ಬಯೋಮೆಟ್ರಿಕ್ ಹಾಜರಾತಿಯನ್ನು ಸ್ವತಃ ಪರಿಶೀಲಿಸಿದ ಆಯುಕ್ತರ ನಡೆಯಿಂದಾಗಿ ಇಡೀ ಪಾಲಿಕೆಯ ಕರ್ಮಚಾರಿಗಳು ಎಚ್ಚೆತ್ತುಕೊಳ್ಳುವಂತಾಗಿದೆ. ಪಾಲಿಕೆ ಆಯುಕ್ತರು ಯಾವಾಗ, ಯಾವ ಬಡಾವಣೆಯಲ್ಲಿ, ಎಷ್ಟು ಹೊತ್ತಿಗೆ ಕಾಣಿಸಿಕೊಳ್ಳುತ್ತಾರೋ ಎಂಬ ಭಯದಿಂದ ಪಾಲಿಕೆ ಸಿಬ್ಬಂದಿ ಮತ್ತು ಕೆಲಸಗಾರರು ಇದೀಗ ಮೈ ಚಳಿ ಬಿಟ್ಟು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಯುಕ್ತರು ಸದಾ ನಗರ ಸ್ವಚ್ಛತೆಯ ಕಡೆ ಮೇಲ್ವಿಚಾರಣೆ ನಡೆಸುತ್ತಿರುವುದರಿಂದ ಕಾರ್ಮಿಕರು ಜಾಗೃತಗೊಂಡಿದ್ದಾರೆ. ಒಟ್ಟಾರೆ ದಿನೇ ದಿನೇ ಬೆಳಗಾವಿಯ ಬಡಾವಣೆಗಳು ಇದೀಗ ಸುಂದರವಾಗಿ ಕಾಣಿಸಿಕೊಳ್ಳುತ್ತಿವೆ. ಕಸದಿಂದ ಮುಕ್ತಿಗೊಂಡು ಸ್ವಚ್ಛವಾಗಿ ಕಾಣಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಆಯುಕ್ತ ನಡೆಸುತ್ತಿರುವ ಕಾರ್ಯಾಚರಣೆ ನಿಜಕ್ಕೂ ಶ್ಲಾಘನೀಯವಾಗಿದೆ.
ಇಂದು ಅಂದರೆ 17-08-2023 ರಂದು ಮುಂಜಾನೆ 5-45 ಗಂಟೆಗೆ ಪಾಲಿಕೆಯ ಆಯುಕ್ತರು ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ತೆರಳಿ, ವಾಹನ ಚಾಲಕರ ಹಾಜರಾತಿ ಪರಿಶೀಲನೆ ಮಾಡಿ, ಪಾಗಿಂಗ್ ಮಶೀನಿನ ಪರಿಶೀಲನೆ ಮಾಡಿದರು. ಸ್ವತ: ಪಾಲಿಕೆಯ ಕಸದ ವಾಹನದಲ್ಲಿ ಕುಳಿತುಕೊಂಡು ಧರ್ಮನಾಥ ಸರ್ಕಲ್ ಬಿಟ್ ಕಚೇರಿಗೆ ಭೇಟಿ ನೀಡಿ ಪೌರಕಾರ್ಮಿಕರ ಹಾಜರಾತಿ ಪರಿಶೀಲಿಸಿ, ಆರೋಗ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು.
ನಂತರ ನಗರ ಸೇವಕರಾದ ಶಾಹೀದ್ ಪಠಾಣ್ ಇವರೊಂದಿಗೆ ವಾರ್ಡ್ ನಂ. 18 ರ ಸುಭಾಷ್ ನಗರದ ಕಸ ವಿಲೇವಾರಿ ಕುರಿತು ಪರಿಶೀಲಿಸಿ ಮಾಡಿ ಮನೆ ಮನೆ ಕಸ ಸಂಗ್ರಹಣ ವಾಹನಗಳ ಪೌರಕಾರ್ಮಿಕರಿಗೆ, ಸಾರ್ವಜನಿಕರಿಗೆ ಹಾಗೂ ನಗರ ನಗರಸೇವಕರಿಗೆ ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಕುರಿತು ತಿಳಿವಳಿಕೆ ನೀಡಿದರು. ರಸ್ತೆ ಪಕ್ಕದಲ್ಲಿ ಕಸದ ರಾಶಿಗಳು ಆಗಬಾರದೆಂದು ನೋಡಿಕೊಳ್ಳಲು ಸಂಬಂಧಪಟ್ಟ ನಿರೀಕ್ಷಕರಿಗೆ ತಾಕೀತು ಮಾಡಿದರು. ನಂತರ ವೀರಭದ್ರ ನಗರ ಹಾಗೂ ಶಿವಾಜಿನಗರದ ನಗರ ಸೇವಕರಾದ ಶ್ರೀಮತಿ ರೇಷ್ಮಾ ಅವರೊಂದಿಗೆ ವಾರ್ಡ್ ಪರಿಶೀಲನೆ ಮಾಡಿ ಸಾರ್ವಜನಿಕರ ಅಹವಾಲುಗಳ ಕುರಿತು ಚರ್ಚಿಸಿ, ಸಂಬಂಧಪಟ್ಟವರಿಗೆಲ್ಲ ನಿರ್ದೇಶನ ನೀಡಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಸ್ವಚ್ಛತೆ ಪರಿಶೀಲಿಸಿದರು. ಖಡಕ್ ಗಲ್ಲಿಯಲ್ಲಿ ಕಸವನ್ನು ರಸ್ತೆಗೆ ಹಾಕುತ್ತಿದ್ದ ಮಹಿಳೆಗೆ ಪಾಲಿಕೆಯ ಕಸದ ವಾಹನಕ್ಕೆ ಕೊಡುವಂತೆ ಮತ್ತು ರಸ್ತೆಗೆ ಹಾಕದಂತೆ ತಿಳಿವಳಿಕೆ ನೀಡಿದರು.