ಚಂದಗಡ :
ಗ್ರಾಮೀಣ ಜನತೆಗೆ ಉತ್ತಮವಾದ ಆರೋಗ್ಯಕೇಂದ್ರಗಳನ್ನು ನಿರ್ಮಿಸುವಲ್ಲಿ, ವೈದ್ಯಕೀಯ ಸೌಲಭ್ಯಗಳು ಹಾಗೂ ಔಷಧೋಪಚಾರ ನೀಡುವಲ್ಲಿ ಕೆಎಲ್ಇ ಆರೋಗ್ಯಸೇವೆಗಳು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಡಜನತೆಗೆ ಹತ್ತಿರವಾಗಿ ಉತ್ತಮವಾದ ಚಿಕಿತ್ಸೆಯನ್ನು ನೀಡುಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಕರ್ನಾಟಕದ ಗಡಿಯಲ್ಲಿರುವ ಚಂದಗಡದ ಪಾಟಣೆ ಫಾಟಾದಲ್ಲಿ ಕೆಎಲ್ಇ ವೆಲ್ನೆಸ್ ಆಸ್ಪತ್ರೆಯನ್ನು ಜನಸೇವೆಗೆ ಅರ್ಪಿಸಿ ಮಾತನಾಡಿದರು.
ದೇಶದಲ್ಲಿ ಕೆಎಲ್ಇ ಸಂಸ್ಥೆಯು ಆರೋಗ್ಯ ಕ್ರಾಂತಿಯನ್ನೇ ಮಾಡಿದೆ. ಶಿಕ್ಷಣದೊಂದಿಗೆ ಆರೋಗ್ಯಕ್ಷೇತ್ರಕ್ಕೆ ಬಹುಮೌಲಿಕ ಕೊಡುಗೆಯನ್ನು ನೀಡಿದೆ. ವೆಲ್ನೆಸ್ ಆಸ್ಪತ್ರೆಗಳ ಪರಿಕಲ್ಪನೆಗಳ ಮೂಲಕ ಬೆಳಗಾವಿಯ ನಗರದ ಸುತ್ತಮುತ್ತ ಬಡವರಿಗೆ ಹಾಗೂ ಕಾರ್ಮಿಕ ಸಮುದಾಯದವರಿಗೆ ಆರೋಗ್ಯಸೇವೆಗಳನ್ನು ನೀಡುತ್ತಿದೆ. ಇಂದು ಮಹಾರಾಷ್ಟ್ರದ ಚಂದಗಡದಲ್ಲಿ ಕೆಎಲ್ಇ ವೆಲ್ನೆಸ್ ಸೆಂಟರ್ ಸ್ಥಾಪಿಸುವ ಮೂಲಕ ತನ್ನ ಆರೋಗ್ಯ ಸೇವೆಯನ್ನು ವಿಸ್ತರಿಸಿದೆ ಮಾತ್ರವಲ್ಲ. ಈ ಭಾಗದ ಜನತೆಗೆ ಹತ್ತಿರವಾಗಿದೆ,
ಈ ಹಿಂದೆ ಚಂದಗಡ ಕೂಡ ಕರ್ನಾಟಕದಲ್ಲಿತ್ತು, ನಂತರ ರಾಜ್ಯ ಪುನರವಿಂಗಡನೆ ನಂತರ ಮಹಾರಾಷ್ಟ್ರದಲ್ಲಿದೆ. ಆದರೆ ಯಾವುದೇ ಗಡಿ ಇಲ್ಲದೇ ಆರೋಗ್ಯ ಸೇವೆಯನ್ನು ಕಲ್ಪಿಸಲಾಗುತ್ತಿದೆ. ಶಿಕ್ಷಣ ಆರೋಗ್ಯ ಸೇವೆಗಳಿಗೆ ಯಾವುದೇ ಗಡಿಗಳಿಲ್ಲ. ನಮಗೆ ಭಾಷೆ, ಜಾತಿ ಯಾವುದೇ ತಾರತಮ್ಯ ಇಲ್ಲದೇ ಸೇವೆಯನ್ನು ಒದಗಿಸುವದು ಮಾತ್ರ ನಮ್ಮ ಗುರಿ. ಅದಕ್ಕಾಗಿ ಕೆಎಲ್ಇ ಸಂಸ್ಥೆ ಸದಾ ಒಂದು ಹೆಜ್ಜೆ ಮುಂದೆ. ಗಡಿ ಮಾತ್ರ ನಮಗೆ ಅಡ್ಡವಿದೆ ಆದರೆ ನಮ್ಮ ಮನಸ್ಸು ಎಲ್ಲ ಕಡೆ ಇದೆ. ಗಡಿಗಳಾಚೆಯು ಸೇವಾ ಮನೋಭಾವ ಇರಬೇಕು. ನಮಗೆ ಈ ಪ್ರದೇಶ ಬೆಳಗಾವಿಗೆ ಸಮೀಪವಿದ್ದರೂ ದೂರವಾಗಿತ್ತು. ಈಗ ನಾವು ನಿಮ್ಮ ಹತ್ತಿರವೇ ಬಂದು ಸೇವೆ ನೀಡುತ್ತಿದ್ದೇವೆ. ಅದರ ಸದುಪಯೋಗವನ್ನು ಪಡೆದುಕೊಳ್ಳಿ. ಮುಂಬರುವ ದಿನಗಳಲ್ಲಿ ಚಂದಗಡದಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಲಿದೆ. ಈಗಾಗಲೇ ಜಾಗೆಯನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ಕೆಎಲ್ಇ ಹೈಯರ್ ಎಜ್ಯುಕೇಶನ ಅಂಡ್ ರಿಸರ್ಚನ ಉಪಕುಲಪತಿ ಡಾ. ನಿತಿನ ಗಂಗಾಣೆ ಮಾತನಾಡಿ ಕಳೆದ ಆರು ತಿಂಗಳಲ್ಲಿ ವೆಲ್ನೆಲ್ ಕಲ್ಪನೆ ಚಿಗುರೊಡೆದು ಈಗ ಆಸ್ಪತ್ರೆ ರೂಪಗೊಂಡು ಜನಸೇವೆಗೆ ಅರ್ಪಣೆಯಾಗಿದೆ. ಇದು ಪ್ರಾರಂಭ. ಶೀಘ್ರದಲ್ಲೇ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ. ಆಸ್ಪತ್ರೆ ನಡೆಸುವದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತು. ಮಹಾತ್ಮಾ ಜ್ಯೋತಿಬಾ ಫುಲೆ ಯೋಜನೆ ಕರ್ನಾಟಕದ ಕೆಎಲ್ಇ ಆಸ್ಪತ್ರೆಯಲ್ಲಿ ಮಾತ್ರವಿದೆ. ಗರ್ಭೀಣಿ ಸ್ತ್ರಿಯರಿಗೆ ಉಚಿತವಾಗಿ ಹೆರಿಗೆ ಮಾಡಲಾಗುವುದು. ಮನೆಯಲ್ಲಿ ಎಂದೂ ಪ್ರಯತ್ನಿಸಬೇಡಿ. ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಸದಸ್ಯ ಗೋಪಾಲರಾವ್ ಪಾಟೀಲ್ ಅವರು ಮಾತನಾಡಿ ಗಡಿಭಾಗದಲ್ಲಿರುವ ಕಾರಣ ಸರಕಾರದ ಯಾವುದೇ ಸೇವೆ ಲಭಿಸಬೇಕಾದರೂ ಕೂಡ ನಾವು ಹೋರಾಟ ಮಾಡಬೇಕಾಗಿದೆ. ಆದರೆ ಯೋಜನೆಗಳು ಇಲ್ಲಿಗೆ ಬಂದು ಮುಟ್ಟಲು ಬಹಳ ತಡವಾಗುತ್ತಿವೆ. ಆದ್ದರಿಂದ ಕರ್ನಾಟಕ ಹಾಗೂ ಕೆಎಲ್ಇ ಸಂಸ್ಥೆಯು ಚಂದಗಡ ತಾಲೂಕನ್ನು ಆರೋಗ್ಯ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಗೊಳಿಸಲು ಕ್ರಮಕೈಕೊಳ್ಳಬೇಕು. ಕೊರೊನಾ ವೇಳೆಯಲ್ಲಿ ಕೊಲ್ಲಾಪೂರ ಜಿಲ್ಲಾಧಿಕಾರಿ ಅವರನ್ನು ಮೇಲಿಂದ ಮೇಲೆ ಸಂಪರ್ಕಿಸಿದರೂ ಕೂಡ ಅಗತ್ಯ ಸೇವೆ ನಮಗೆ ಲಭಿಸಲಿಲ್ಲ. ಕೊನೆಗೆ ಬೆಳಗಾವಿ ಆಸ್ಪತ್ರೆಗೆ ಅಲೆದಾಡಬೇಕಾಯಿತು. ಈಗ ಕೆಎಲ್ಇ ವೆಲ್ನೆಸ್ ಆಸ್ಪತ್ರೆ ಇಲ್ಲಿ ಪ್ರಾರಂಭಿಸಿರುವುದು ಈ ಭಾಗದ ಜನತೆಗೆ ಅನುಕೂಲವಾಗಿದೆ ಎಂದು ಹೇಳಿದರು.
ಪ್ರಗತಿಪರ ರೈತ ಡಾ. ಪರಶುರಾಮ ಪಾಟೀಲ ಮಾತನಾಡಿ ಈ ಭಾಗದ ಜನರ ಆರೋಗ್ಯ ಸೇವೆ ಮತ್ತು ಜೀವನ ಅಮೂಲಾಗ್ರ ಬದಲಾವಣೆ ಕೆಎಲ್ಇ ಸಂಸ್ಥೆಯು ಈ ಆಸ್ಪತ್ರೆಯನ್ನು ಪ್ರಾರಂಭಿಸಿರುವುದು ಅಭಿನಂದನೀಯವೆನಿಸಿದೆ. ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯ ಕುರಿತು ಚಿಂತಿಸುವ ಸ್ಥಿತಿಇತ್ತು. ಈ ಭಾಗದಲ್ಲಿ ಆಸ್ಪತ್ರೆ ಅತ್ಯವಶ್ಯಕವಾಗಿತ್ತು. ಅದನ್ನು ಡಾ. ಪ್ರಭಾಕರ ಕೋರೆ ಅವರು ಪೂರ್ಣಗೊಳಿಸಿದ್ದಾರೆ. ಇದರ ಸದುಪಯೋಗ ಪಡಿಸಿಕೊಂಡರೆ ಮುಂಬರುವ ದಿನಗಳಲ್ಲಿ ಸಕಲ ವ್ಯವಸ್ಥೆಯುಳ್ಳ ದೊಡ್ಡದಾದ ಆಸ್ಪತ್ರೆ ತಲೆ ಎತ್ತಲಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಎಲ್ಇ ಆಸ್ಪತ್ರೆಗಳ ಸಂಯೋಜಕ ಡಾ. ವಿ ಡಿ ಪಾಟೀಲ, ಚಂದಗಡ ಭಾಗದಲ್ಲಿ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಡಾ. ಕೋರೆ ಅವರ ಕನಸು ನನಸಾಗುತ್ತಿದೆ. ಮುಂಬರುವ ದಿನಗಳಲ್ಲಿ ೫ ಎಕರೆ ವಿಸ್ತೀರ್ಣದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಕೇವಲ ಮೂರು ವರ್ಷದಲ್ಲಿ ತಲೆ ಎತ್ತಲಿದೆ. ೨೪ ಗಂಟೆಗಳ ಕಾಲ ಅಂಬ್ಯುಲನ್ಸ್ ಸೇವೆಯನ್ನು ಇಲ್ಲಿ ಕಲ್ಪಿಸಲಾಗುವುದೆಂದು ಹೇಳಿದರು.
ಸಮಾರಂಭದಲ್ಲಿ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ವಿ. ಡಿ. ಪಾಟೀಲ, ಕೆಎಲ್ಇ ನಿರ್ದೇಶಕರಾದ ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ, ಅಮರ ಬಾಗೇವಾಡಿ, ಡಾ. ವಿ ಎಸ್ ಸಾಧುನವರ, ಡಾ. (ಕರ್ನಲ್) ಎಂ ದಯಾನಂದ, ಡಾ. ಎಂ ಎಸ್ ಗಣಾಚಾರಿ, ಗೋಪಾಲರಾವ್ ಪಾಟೀಲ ಉಪಸ್ಥಿತರಿದ್ದರು.