ಮಂಗಳೂರು:
ಮಕ್ಕಳೇ ಕಾಲ್ ಮಾಡ್ತಾರೆ…! ಶಾಲೆಗೆ ರಜೆ ಕೊಡ್ತೀರಾ ಎಂದು ಕೇಳ್ತಾರೆ. ರಾತ್ರಿಯಿಡೀ ಕಾಲ್ ಮಾಡ್ತಾರೆ. ನಡುರಾತ್ರಿಯಲ್ಲಿಯೂ ಕಾಲ್ ಮಾಡ್ತಾರೆ. ಚಂದ ಮಾತನಾಡ್ತಾರೆ. ಎಷ್ಟು ಚಂದ ಮಾತನಾಡ್ತಾರಂದ್ರೆ ನಮಗೇ ರಜೆ ಕೊಡಬೇಕು ಅಂತಾನೇ ಅನಿಸಬೇಕು” ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮಳೆಯಾಗಿತ್ತು. ಧಾರಾಕಾರ ಮಳೆಗೆ ನಾಲ್ಕು ದಿನಗಳ ರಜೆ ನೀಡಲಾಗಿತ್ತು. ಆದರೆ ರೆಡ್ ಅಲರ್ಟ್ ಇಲ್ಲದ ವೇಳೆ ಜಿಲ್ಲಾಧಿಕಾರಿಯವರಿಗೆ ಶಾಲೆಯ ಮಕ್ಕಳೇ ಕರೆ ಮಾಡಿ ರಜೆ ಇದೆಯೇ ಎಂದು ಕೇಳಿರುವುದನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಸ್ಯವಾಗಿ ಹೇಳಿರುವ ವೀಡಿಯೋ ಇದೀಗ ವೈರಲ್ ಆಗಿದೆ. ಟೀಚರ್ ಗಳೇ ಕರೆ ಮಾಡಿಸ್ತಾರಾ?!ರಾತ್ರಿಪೂರ್ತಿ ಕರೆ ಮಾಡ್ತಾರೆ…!, ಬೆಳಗ್ಗೆ ನಾಲ್ಕು ಗಂಟೆಗೆ ಕರೆ ಮಾಡ್ತಾರೆ. ಮಳೆ ಬರುವ ಸಂದರ್ಭ. ಆದ್ದರಿಂದ ಎಲ್ಲವೂ ಎಮರ್ಜೆನ್ಸಿ ಕರೆ ಎಂದು ಕರೆ ಸ್ವೀಕರಿಸಿದ್ರೆ, ಅದೆಲ್ಲವೂ ನಮ್ಮಲ್ಲಿ ರಜೆ ಉಂಟಾ… ಎಂಬ ಕರೆಗಳೇ! ಚಂದ ಇಂಗ್ಲಿಷ್ ನಲ್ಲಿ ಮಾತನಾಡ್ತಾರೆ. ನನಗಿರುವ ಮಾಹಿತಿ ಟೀಚರ್ ಗಳೇ ಈ ಕರೆ ಮಾಡಿಸ್ತಾರೆ ಎಂಬುದು. ಪಿಯು ಮಕ್ಕಳಿಗೆ ರಜೆ ಕೊಟ್ಟಿದ್ದೀರಿ ಟೆಕ್ನಿಕಲ್, ಎಂಜಿನಿಯರಿಂಗ್ ಕಾಲೇಜಿಗೆ ಕೊಟ್ಟಿಲ್ಲ ಎಂಬ ಕರೆಗಳೂ ಬರುತ್ತಿತ್ತು ಎಂದು ಡಿಸಿ ಹೇಳಿದರು. ಇದೇ ವೇಳೆ ನಾವು ರಜೆ ಕೊಟ್ಟವತ್ತು ಮಳೆ ಬರುವುದಿಲ್ಲ. ರಜೆ ಕೊಡದವತ್ತು ಮಳೆ ಬರುತ್ತದೆ ಎಂದು ಚಟಾಕಿ ಹಾರಿಸಿದರು. ಮುಲ್ಲೈ ಮುಗಿಲನ್ ಪದದ ಅರ್ಥ ಇದೇ ವೇಳೆ ಮಾಧ್ಯಮದವರು ಕೇಳಿದ ಡಿಸಿಯವರ ಹೆಸರು ಮುಲ್ಲೈ ಮುಗಿಲನ್ ಎಂಬ ಪದದ ಅರ್ಥವನ್ನೂ ಜಿಲ್ಲಾಧಿಕಾರಿಯವರು ಇದೇ ವೇಳೆ ವಿವರಿಸಿದರು. ತಮಿಳುಭಾಷೆಯಲ್ಲಿ ಮುಲ್ಲೈ ಅಂದರೆ ಒಣಕಾಡು. ಮುಹಿಲನ್ ಅಂದರೆ ಮೋಡ. ನಾನು ಕನ್ನಡದಲ್ಲಿ ಮುಗಿಲು ಎಂಬ ಸಮಾನ ಅರ್ಥ ಬರುವಂತೆ ಮುಗಿಲನ್ ಮಾಡಿಕೊಂಡಿದ್ದೇನೆ. ಇದು ಎಲ್ಲರಿಗೂ ಸರಳವಾಗಿ ಅರ್ಥವಾಗುತ್ತದೆ ಎಂದು ಹೇಳಿದರು. ಪತ್ರಕರ್ತರು ಸಹ ಮುಲೈ ಮುಗಿಲನ್ ಜೊತೆಗಿನ ಸಂವಾದವನ್ನು ಆನಂದಿಸಿದರು. ಅವರು ಮಾತನಾಡಿದ ವಿಡಿಯೋ ಕ್ಲಿಪ್ಪಿಂಗ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. 2013ರ ಕರ್ನಾಟಕ ಕೆಡೆರ್ ಐಎಎಸ್ ಅಧಿಕಾರಿಮುಲ್ಲೈ ಮುಗಿಲನ್ ಅವರು ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಜೂನ್ 17ರಂದು ಅಧಿಕಾರ ಸ್ವೀಕರಿಸಿದರು. ಮೂಲತಃ ತಮಿಳುನಾಡಿನವರಾದ ಅವರು 2013ರ ಕರ್ನಾಟಕ ಕೆಡೆರ್ ಐಎಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಅದೇ ರೀತಿಯಾಗಿ ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗದ್ದರು. ಅಲ್ಲಿಂದ ಉತ್ತರ ಕನ್ನಡದ ಜಿಲ್ಲಾಧಿಕಾರಿಯಾಗಿ ನೇಮಕಗೊಂಡರು. ಇಲ್ಲಿಂದ ಬೆಂಗಳೂರು ಸ್ಮಾರ್ಟ್ ಗವರ್ನೆನ್ಸ್ ಸೆಂಟರ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಯದ ಪಿಎಸ್ ಎನ್ಎ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು.