ಬೆಂಗಳೂರು :ಕನ್ನಡ ಚಿತ್ರರಂಗದ ಖ್ಯಾತ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ ರಾಘವೇಂದ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕುಟುಂಬ ಸಮೇತ ವಿದೇಶ ಪ್ರಯಾಣಕ್ಕೆ ತೆರಳಿದ್ದ ಸ್ಪಂದನಾ ಅವರಿಗೆ ಹೃದಯಾಘಾತವಾಗಿದ್ದು, ಬ್ಯಾಂಕಾಕ್ನಲ್ಲಿ ನಿನ್ನೆ ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಿವೃತ್ತ ಅಧಿಕಾರಿ ಡಿ.ಕೆ ಶಿವರಾಮ್ ಅವರ ಮಗಳಾಗಿದ್ದ ಸ್ಪಂದನಾ ಅವರು 2007ರಲ್ಲಿ ಕನ್ನಡ ಚಿತ್ರಗಂಗದ ನಟರಾಗಿದ್ದ ವಿಜಯ ರಾಘವೇಂದ್ರ ಅವರನ್ನು ವಿವಾಹವಾಗಿದ್ದರು. ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರಾದ ಸ್ಪಂದನಾ ಸದ್ಯ ಬೆಂಗಳೂರಿನಲ್ಲಿ ವಾಸವಿದ್ದರು.
ಸ್ಪಂದನಾ ಹಾಗೂ ವಿಜಯ ರಾಘವೇಂದ್ರ ಅವರು ವಿದೇಶಿ ಪ್ರವಾಸಕ್ಕೆ ತೆರಳಿದ್ದು, ಈ ವೇಳೆ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ. ಸದ್ಯ ಸ್ಪಂದನಾ ತಂದೆ ಹಾಗೂ ಕುಟುಂಬ ಬ್ಯಾಂಕಾಕ್ಗೆ ತೆರಳುತ್ತಿದ್ದಾರೆ. ನಾಳೆ ಬೆಂಗಳೂರಿಗೆ ಸ್ಪಂದನಾ ಅವರ ಮೃತದೇಹ ರವಾನೆ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸ್ಪಂದನ, ರವಿಚಂದ್ರನ್ ನಿರ್ದೇಶನದ ಅಪೂರ್ವ ಸಿನಿಮಾದಲ್ಲಿ ಅಭಿನಯಿಸಿದ್ದರು. ಅಪೂರ್ವ ಸಿನಿಮಾದಲ್ಲಿ ರವಿಚಂದ್ರನ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ವಿಜಯ್ ರಾಘವೇಂದ್ರ ಅಭಿನಯದ ಕೆಲ ಸಿನಿಮಾಗಳಲ್ಲಿ ನಿರ್ಮಾಪಕಿಯಾಗಿ ಸಹ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.