ಧೂಳೆಬ್ಬಿಸುವ ನಿರೀಕ್ಷೆ ಮೂಡಿಸಿದ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ಇಂದು ರಿಲೀಸ್
ಬೆಂಗಳೂರು :
ಖ್ಯಾತ ನಿರ್ದೇಶಕ ರಿಶಬ್ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಮತ್ತೆ ಧೂಳೆಬ್ಬಿಸಲಿದ್ದಾರೆ. ಅವರ ನಟನೆಯ ಕಾಂತಾರ ಸಿನಿಮಾ ಇಂದು ರಿಲೀಸ್ ಆಗಿದೆ. ಗುರುವಾರ ವಿವಿಧ ಕಡೆಗಳಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಸೆಲೆಬ್ರಿಟಿಗಳಿಗಾಗಿ ವಿಶೇಷ ಶೋ ಏರ್ಪಡಿಸಲಾಗಿತ್ತು. ಸಿನಿಮಾ ನೋಡಿದ ರಕ್ಷಿತ್ ಶೆಟ್ಟಿ ಅವರು ರಿಷಬ್ ಶೆಟ್ಟಿ ನಿರ್ದೇಶನದ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ ಕಾಂತಾರ ಚಲನಚಿತ್ರ ಭಾರೀ ಅಲೆ ಸೃಷ್ಟಿಸುವ ಸಾಧ್ಯತೆಯಿದೆ. ಕರಾವಳಿಯ ದೈವಾರಾಧನೆ, ಕೋಲ ಮುಂತಾದ ಆಕರ್ಷಣೆಗಳು ಈ ಚಲನಚಿತ್ರದಲ್ಲಿರುವುದು ವಿಶೇಷ.
ಕೆಜಿಎಫ್ 1,2 ಚಲನಚಿತ್ರ ನಿರ್ಮಿಸಿ ಬಂಗಾರದ ಬೆಳೆ ತೆಗಿದಿದ್ದ ನಿರ್ಮಾಪಕ ವಿಜಯ್ ಕಿರಂಗದೂರು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಅವರ ಹೊಂಬಾಳೆ ಫಿಲ್ಮ್ ಮೂಲಕ ಕಾಂತಾರ ಕಂಗೊಳಿಸಲಿದೆ. ರಿಷಬ್ ಇಲ್ಲಿ ನಿರ್ದೇಶನದ ಜತೆ ನಟನೆಯನ್ನೂ ಮಾಡಿದ್ದಾರೆ. ಕುಂದಾಪುರದ ಈ ಪ್ರತಿಭಾವಂತ ಕಲಾವಿದ ಈ ಚಲನಚಿತ್ರದಲ್ಲಿ ಮಿಂಚುವುದು ಬಹುತೇಕ ಖಚಿತ ಎಂಬ ನಿರೀಕ್ಷೆ ಮೂಡಿಸಿದೆ.
ದಕ್ಷಿಣ ಕನ್ನಡದ ಕಾಲ್ಪನಿಕ ಹಳ್ಳಿಯಲ್ಲಿ ನೆಲೆಗೊಂಡಿರುವ ಕಾಂತಾರ ಕಂಬಳ ಮತ್ತು ಭೂತದ ಕೋಲದ ಸಾಂಪ್ರದಾಯಿಕ ಸಂಸ್ಕೃತಿಯನ್ನು ಜೀವಂತಗೊಳಿಸುವ ದೃಶ್ಯವೈಭವವಾಗಿದೆ. ದೇವಮಾನವರು ರಕ್ಷಕ ಮತ್ತು ಅವರ ಶಕ್ತಿಗಳು ಗ್ರಾಮವನ್ನು ಸುತ್ತುವರಿದಿವೆ ಎಂದು ನಂಬಲಾಗಿದೆ. ಕಥೆಯಲ್ಲಿ ನೆಲದ ಸಂಪ್ರದಾಯ ಮತ್ತು ಸಂಸ್ಕೃತಿಯ ಉದ್ದಕ್ಕೂ ಸುತ್ತುತ್ತಿರುವ ಏರಿಳಿತವಿದೆ.
ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ ಅವರು ಕರಾವಳಿಯ ಹುಡುಗಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಸಪ್ತಮಿ ಗೌಡ ಅವರು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ಆದರೆ ಕಾಂತಾರಾ ಸಿನಿಮಾ ಕರಾವಳಿಯ ಆಚರಣೆ, ಸಂಸ್ಕೃತಿಯನ್ನು ಒಳಗೊಂಡಿದೆ. ಈ ಬಗ್ಗೆ ಮಾತನಾಡಿರುವ ಸಪ್ತಮಿ ಗೌಡ ನಾನು ಜನಿಸಿದ ಮೇಲೆ ಬೆಂಗಳೂರಿನಲ್ಲಿ ಕಳೆದಿದ್ದೆ. ಕರ್ನಾಟಕದ ಬೇರೆ ಪರಿಸರ ಸಂಸ್ಕೃತಿಗಳ ಬಗ್ಗೆ ಗೊತ್ತಿಲ್ಲ. ಗೊತ್ತಿಲ್ಲದ ಅನೇಕ ವಿಷಯಗಳನ್ನು ತಿಳಿದುಕೊಳ್ಳುವಂತೆ ಈ ಸಿನಿಮಾದಿಂದ ನನಗೆ ಸಾಧ್ಯವಾಗಿದೆ. ಕಾಂತಾರ ಸಿನಿಮಾಕ್ಕೆ ಆಯ್ಕೆಯಾದ ಮೇಲೆ ಏಳೆಂಟು ತಿಂಗಳು ಕರಾವಳಿಯಲ್ಲಿ ಇರಬೇಕಾಯಿತು. ಆ ಸಂದರ್ಭದಲ್ಲಿ ಅಲ್ಲಿನ ಜನಜೀವನ, ಆಚರಣೆಗಳ ಬಗ್ಗೆ ತಿಳಿದುಕೊಂಡೆ. ನಿಜವಾಗಿಯೂ ಕಾಂತಾರ ಕೇವಲ ನಟಿಯಾಗಿ ನನ್ನ ಅಭಿನಯಕ್ಕಷ್ಟೇ ಸೀಮಿತವಾಗಿರಲಿಲ್ಲ. ಈ ಚಲನಚಿತ್ರಕ್ಕಾಗಿ ಕುಂದಾಪ್ರ ಕನ್ನಡ ಭಾಷೆ ಕಲಿತಿದ್ದೇನೆ. ದೈವಾರಾಧನೆ, ಕೋಲ ವಿಶೇಷತೆಗಳ ಬಗ್ಗೆ ಸಹ ತಿಳಿದುಕೊಂಡಿದ್ದೇನೆ. ಕುಂದಾಪುರ ಭಾಗದ ಹುಡುಗಿಯೊಬ್ಬಳು ಹೇಗಿರುತ್ತಾಳೆ ಎನ್ನುವುದನ್ನು ನನ್ನ ಪಾತ್ರ ತೋರಿಸುತ್ತದೆ. ಇದೊಂದು ವಿಶೇಷ ಚಲನಚಿತ್ರ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಪ್ರೀಮಿಯರ್ ಶೋ ನಡೆದಿದ್ದು ಸಿನೆಮಾ ರಂಗದ ಗಣ್ಯರ ಜತೆ ಅಭಿಮಾನಿಗಳು ಕಾಂತಾರ ವನ್ನು ಕಣ್ತುಂಬಿಸಿಕೊಂಡಿದ್ದಾರೆ. ಕಾಂತಾರಾ ಉತ್ತಮ ನಟನೆ, ಉತ್ತಮ ನಿರ್ದೇಶನ, ಉತ್ತಮ ಕಥಾಹಂದರ ಇದೆ ಎಂದು ಕೊಂಡಾಡಿದ್ದಾರೆ. ಕೆಲವರಂತೂ ಈ ಬಾರಿ ರಿಷಬ್ ಅತ್ಯುತ್ತಮ ನಟ ಪ್ರಶಸ್ತಿಗೆ ಅರ್ಹ ಎಂದು ಹೊಗಳಿದ್ದಾರೆ.
ಕಾಂತಾರದಲ್ಲಿ ಶಿವನಾಗಿ ರಿಷಬ್ ಶೆಟ್ಟಿ, ಲೀಲಾ ಆಗಿ ಸಪ್ತಮಿ ಗೌಡ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಉಗ್ರಂ ರವಿ ಸೇರಿದಂತೆ ಘಟಾನುಘಟಿಗಳಿದ್ದಾರೆ. ಅಜನೀಶ್ ಲೋಕನಾಥ್ ,ಸಂಗೀತ ವಿಜಯ ಪ್ರಕಾಶ್, ಅನನ್ಯ ಭಟ್ ಮತ್ತಿತರ ದನಿಯಲ್ಲಿ ಹಾಡುಗಳು ಮೂಡಿಬಂದಿವೆ.