ಸುಪ್ರೀಂಕೋರ್ಟ್ ನಿಯಮದಂತೆ ಡಾಲ್ಬಿಗೆ ಪರವಾನಿಗೆ..!
ಕಡೋಲಿ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಡಿಸಿಪಿ ಗಡಾದಿ ಹೇಳಿದ್ದೇನು….?
ಬೆಳಗಾವಿ: ನಿನ್ನೆ (ಬುಧವಾರ) ತಾಲೂಕಿನ ಕಡೋಲಿ ಗ್ರಾಮದಲ್ಲಿ ದಸರಾ ಹಬ್ಬ ಆಚರಣೆಯ ಪ್ರಯುಕ್ತ ಶಾಂತತಾ ಸಭೆಯನ್ನು ಡಿಸಿಪಿ ರವೀಂದ್ರ ಗಡಾದಿ (ಕಾ & ಸು) ಹಾಗೂ ಕಾಕತಿ ಪಿಐ ಗುರುನಾಥ ಐ ಎಸ್ ನೇತೃತ್ವದಲ್ಲಿ ನಡೆಸಲಾಯಿತು.
ಕಳೆದ ವರ್ಷ ಕಾಕತಿ ಪೊಲೀಸರು ಮೊಟ್ಟಮೊದಲ ಬಾರಿಗೆ ಕಡೋಲಿ ಗ್ರಾಮದಲ್ಲಿ ದಸರಾ ನಿಮಿತ್ತ ನಡೆಸಲಾಗುವ ಅಡಂಬರ ಡಾಲ್ಬಿ ಹಾಗೂ ಡಿಜೆ ಮೆರವಣಿಗೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು. ಈ ಮೆರವಣಿಗೆಯಲ್ಲಿ ಪ್ರತಿ ವರ್ಷ ಯುವಕರ ಮಧ್ಯೆ ಮಾರಾಮಾರಿ, ಗುಂಪು ಗಲಭೆ, ಚಾಕು ಇರಿತ ಸೇರಿದಂತೆ ಹಲವು ಅಹಿತಕರ ಘಟನೆಗಳು ನಡೆಯುತ್ತಿದ್ದವು. ಆದರಿಂದ ಇದನ್ನು ಸೂಕ್ಷ್ಮವಾಗಿ ಅರಿತಿದ್ದ ಕಾಕತಿ ಪಿಐ ಗುರುನಾಥ ಅವರು ಸಂಪೂರ್ಣವಾಗಿ ಬಂದ ಮಾಡಿಸಿದ್ದರು. ಇದರಿಂದ ಕೆರಳಿ ಕಂಗಾಲಾಗಿದ್ದ ಅಲ್ಲಿನ ಯುವಕರು ಹಬ್ಬಕ್ಕೆ ಶುಭಾಶಯ ಕೋರಿ ಅಂಟಿಸಿದ್ದ ಶಾಸಕ ಹಾಗೂ ಮುಖಂಡರ ಬ್ಯಾನರಗಳನ್ನು ಹರಿದು ಆಕ್ರೋಶ ಹೊರಹಾಕಿದ್ದರು.
ಆದರೆ ಬರುವ ವರ್ಷ (2023) ಜಿಪಂ-ತಾಪಂ ಹಾಗೂ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಇರುವದರಿಂದ ಈ ಬಾರಿ ಕಡೋಲಿಯಲ್ಲಿ ಡಾಲ್ಬಿ ಮೆರವಣಿಗೆ ಶತಾಯ ಗತಾಯವಾಗಿ ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಅದಕ್ಕಾಗಿ ಅಲ್ಲಿನ ಮುಖಂಡರು ಪೊಲೀಸ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಅನುಮತಿಗಾಗಿ ಮನವಿ ಮಾಡಿದ್ದರು.
ಇದರ ಬೆನ್ನಲೆ ಡಿಸಿಪಿ ಗಡಾದಿ ಖುದ್ದು ಕಡೋಲಿ ಗ್ರಾಮಕ್ಕೆ ಆಗಮಿಸಿ ಸಭೆ ನಡೆಸಿದರು. ಮುಖಂಡರ, ಯುವಕರ ಮಾತುಗಳನ್ನು ಆಲಿಸಿ ಸುಪ್ರೀಂ ಕೋರ್ಟ್ ನಿಯಮಾವಳಿ ಪ್ರಕಾರ ಮಾತ್ರ ಡಾಲ್ಬಿ ಹಚ್ಚುವಂತೆ ತಿಳಿಸಿದರು. ಈ ವೇಳೆ ಗುಂಪು ಗಲಭೆ, ಮಾರಾಮಾರಿಯಲ್ಲಿ ಭಾಗಿಯಾದವರ ವಿರುದ್ಧ ಹಾಗೂ ಆಯೋಜಕರ ವಿರುದ್ಧ ಮುಲಾಜೀಲ್ಲದೆ ಕಾನೂನು ಕ್ರಮ ಜರುಗಿಸುವುದಾಗಿ ಮುನ್ನೆಚ್ಚರಿಕೆ ನೀಡಿ ಶಾಂತಿಯಿಂದ ಹಬ್ಬವನ್ನು ಆಚರಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಕಾಕತಿ ಪಿಎಸ್ಐ ಮಂಜುನಾಥ ಹುಲಕುಂದ, ಶಾಸಕರ ಆಪ್ತ ಸಹಾಯಕ ಮಲಗೌಡ ಪಾಟೀಲ, ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಗ್ರಾಮಸ್ಥರು ಹಾಗೂ ಯುವಕರು ಉಪಸ್ಥಿತರಿದ್ದರು.