ಬೆಳಗಾವಿ:
ಜಾಂಬೋಟಿ ಬಳಿಯ ಬಟವಡೆ ಫಾಲ್ಸ್ ಬಳಿ ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಪ್ರವೇಶ ಮಾಡಿ ಮೋಜು ಮಸ್ತಿ ನಡೆಸಿದ ನಾಲ್ವರು ಅಧಿಕಾರಿಗಳ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ನಿರ್ಬಂಧಿತ ಪ್ರದೇಶವಾದರೂ ಅಕ್ರಮವಾಗಿ ಪ್ರವೇಶಿಸಿದ ಅಧಿಕಾರಿಗಳು ಭಾರೀ ಎಣ್ಣೆ ಪಾರ್ಟಿ ಮಾಡಿದ್ದರು. ಕೊನೆಗೂ ವಿಷಯ ಗಮನಕ್ಕೆ ಬರುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಗ್ಯಾಸ್ ಸ್ಟವ್, ಅಡುಗೆ ಸಾಮಗ್ರಿಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹೆಸ್ಕಾಂ ಅಧಿಕಾರಿಗಳು, ವೈದ್ಯರು ಈ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದ್ದು ಹೆಸ್ಕಾಂ ನ ಬೊಲೇರೋ ವಾಹನದಲ್ಲಿ ಬಂದಿದ್ದ ಸಿಬ್ಬಂದಿಗಳ ವಿರುದ್ಧ ಅರಣ್ಯ ಅಧಿಕಾರಿಗಳು ಮೊದಲಿಗೆ ಕ್ರಮಕ್ಕೆ ಮುಂದಾಗಿರಲಿಲ್ಲ ಎಂಬ ಮಾಹಿತಿ ಇದೆ. ಕೊನೆಗೂ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ನಿರ್ಬಂಧಿತ ಪ್ರದೇಶದಲ್ಲಿ ಅನುಮತಿ ಇಲ್ಲದೆ ಪ್ರವೇಶ ಮಾಡಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ದೂರು ದಾಖಲಿಸಲು ಡಿಸಿ ನಿರ್ದೇಶನ :
ನಿರ್ಬಂಧ ಇದ್ದರೂ ಅದನ್ನು ಉಲ್ಲಂಘಿಸಿ ಬಡವಡೆ ಫಾಲ್ಸ್ ಬಳಿ ಅರಣ್ಯ ಪ್ರದೇಶದಲ್ಲಿ ಮೋಜು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ದೂರು ದಾಖಲಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು, ವೈದ್ಯರ ತಂಡ ಎಣ್ಣೆ ಪಾರ್ಟಿ ಮಾಡಿದೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಾಲ್ವರು ಹೆಸ್ಕಾಂ ಸಿಬ್ಬಂದಿ ವಿರುದ್ಧವು ದೂರು ದಾಖಲಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.