ತುಮಕೂರು :
ಸುಳ್ಳು ಸುದ್ದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಕಾನೂನು ತರುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು. ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸುಳ್ಳು ಸುದ್ದಿಗಳು ಸಮಾಜಕ್ಕೆ ಅಪಾಯಕಾರಿ. ಆದ್ದರಿಂದ ಸುಳ್ಳು ಸುದ್ದಿಗಳನ್ನು ನಿಯಂತ್ರಿಸಲು ಸದ್ಯದಲ್ಲೇ ಹೊಸ ಕಾನೂನು ಜಾರಿಗೆ ತರುವ ಕುರಿತು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಪತ್ರಿಕೆಗಳು ಸಮಾಜದಲ್ಲಿ ದೊಡ್ಡ ಜವಾಬ್ದಾರಿ ಹೊಂದಿವೆ. ಅವು ಪವರ್ ಫುಲ್ ಆಗಿವೆ. ಇದನ್ನು ಪತ್ರಕರ್ತರು ಸಮಾಜದ ಒಳಿತಿಗೆ, ಶೋಷಿತರು ಮತ್ತು ಅಶಕ್ತರ ಬದುಕು ಉತ್ತಮಗೊಳ್ಳುವಂತೆ ಮಾಡಲು ಬಳಸಬೇಕು ಎಂದು ಹೇಳಿದರು.
ಬ್ಲಾಕ್ ಮೇಲ್ ಹೆಚ್ಚುತ್ತಿದೆ :
ಇಂದು ನೈಜ ಪತ್ರಕರ್ತರಿಗಿಂತ ಬ್ಲಾಕ್ ಮೇಲ್ ಪತ್ರಕರ್ತರ ಸಂಖ್ಯೆ ಹೆಚ್ಚು ಹೆಚ್ಚಳವಾಗಿದೆ. ಇದನ್ನು ನಿಯಂತ್ರಿಸುವ ಕೆಲಸ ಸರಕಾರ ಮಾಡಬೇಕು. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಪೊಲೀಸರು ಪತ್ರಕರ್ತರ ವಿರುದ್ಧ ದೂರು ಬಂದಾಗ ಒಮ್ಮೆ ಆ ದೂರು, ಘಟನೆ ಬಗ್ಗೆ ಪರಾಮರ್ಶಿಸಿ ನಂತರ ಕೇಸು ದಾಖಲಿಸುವ ಕೆಲಸ ಮಾಡಬೇಕು. ಇಲ್ಲದೆ ಇದ್ದರೆ ಆ ಪತ್ರಕರ್ತ ಕೇಸುಗಳ ನಡುವೆ ಸಿಲುಕಿ ಆಚೆ ಬರಲು ಒದ್ದಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಗೃಹ ಸಚಿವ ಪರಮೇಶ್ವರ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದರು.