ಬೆಂಗಳೂರು:
ಮದ್ಯದ ಬೆಲೆ ಏರಿಕೆ ಇಂದಿನಿಂದ (ಜುಲೈ 21) ಅನ್ವಯವಾಗುವಂತೆ ಜಾರಿಯಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಜುಲೈ 18ರಂದು ಪ್ರಕಟಿಸಿದೆ.
ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು 1968, ಕರ್ನಾಟಕ ಅಬಕಾರಿ ಅಧಿನಿಯಮ 1965, (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 21)ರ 71ನೇ ಪ್ರಕರಣದ 1ನೇ ಉಪ ಪ್ರಕರಣದಲ್ಲಿ ತಿದ್ದುಪಡಿ ಕರ್ನಾಟಕ ಸರ್ಕಾರ ಈ ಅಧಿಸೂಚನೆಯನ್ನು ಪ್ರಕಟಿಸಿದೆ.
ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದ, ಇನ್ನು ಜಾರಿಗೆ ತರಬೇಕಾದ ವಿವಿಧ ಜನಪ್ರಿಯ ಯೋಜನೆಗಳ, ಗ್ಯಾರೆಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸುವ ಸಲುವಾಗಿ ಆದಾಯ ಹೆಚ್ಚಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್ ಸರ್ಕಾರದ್ದು. ಇದರ ಪರಿಣಾಮವಾಗಿ ನಿರೀಕ್ಷೆಯಂತೆಯೇ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ.
ಅಬಕಾರಿ ಸುಂಕ ಹೆಚ್ಚಳ ಬಹುತೇಕ ಕೂಡಲೇ ಜಾರಿಗೆ ಬರಲಿದೆ. ಬಜೆಟ್ ಪ್ರತಿಯಲ್ಲಿ ಕೊಟ್ಟಿರುವ ಪಟ್ಟಿಯ ಪ್ರಕಾರ, ಮದ್ಯದ ರಟ್ಟಿನ ಪೆಟ್ಟಿಗೆಯ ದರಗಳ ಅಬಕಾರಿ ಸುಂಕ ಹೆಚ್ಚಳದ ವಿವರ ಹೀಗಿದೆ.
ಪ್ರತಿ ರಟ್ಟಿನ ಪೆಟ್ಟಿಗೆಯ ಬೆಲೆ 450 ರೂಪಾಯಿ ತನಕ ಇದ್ದರೆ ಅದರ ಅಬಕಾರಿ ಸುಂಕ 215 ರೂಪಾಯಿ ಆಗಲಿದೆ.
ಇದೇ ರೀತಿ, 450ರಿಂದ 499 ರೂಪಾಯಿ ತನಕದ ಮೌಲ್ಯದ ಪೆಟ್ಟಿಗೆ ಮೇಲಿನ ಅಬಕಾರಿ ಸುಂಕ 294 ರೂಪಾಯಿ ಆಗಲಿದೆ. ಅದೇ ರೀತಿ 500 ರೂಪಾಯಿಯಿಂದ 549 ರೂಪಾಯಿ ತನಕದ ಪೆಟ್ಟಿಗೆಯ ಸುಂಕ 386 ರೂಪಾಯಿ ಆಗಲಿದೆ. ಈ ರೀತಿ, 18 ಸ್ತರದಲ್ಲಿ ಅಬಕಾರಿ ಸುಂಕ ಹೆಚ್ಚಳವಾಗಿದೆ. ಇದರಲ್ಲಿ ಬ್ರಾಂದಿ, ವಿಸ್ಕಿ, ಜಿನ್, ರಮ್ ಮತ್ತು ಅಂಥ ಇತರ ಮದ್ಯಗಳು ಮಾತ್ರ ಒಳಗೊಂಡಿವೆ. ಆದರೆ, ಬಿಯರ್, ವೈನ್, ಸೇಂದಿ ಮತ್ತು ಪೆನ್ನಿಗಳು ಈ ವ್ಯಾಪ್ತಿಗೆ ಬರುವುದಿಲ್ಲ.
ಕರ್ನಾಟದಲ್ಲಿ ಮದ್ಯದ ದರ ಹೆಚ್ಚಳ
ಮದ್ಯದ ದರ ಹೆಚ್ಚಳ ಎಷ್ಟು – ಏನು ವಿವರ ಇಲ್ಲಿದೆ
ಕ್ರಮ ಸಂಖ್ಯೆ ಮದ್ಯದ ಘೋಷಿತ ಬೆಲೆ (ರೂಪಾಯಿ) ಸುಂಕ ಹೆಚ್ಚಳ (ರೂಪಾಯಿ)
01 0-449 215
02 450-499 294
03 500-549 386
04 550-599 497
05 600-699 668
06 700-799 816
07 800-899 870
08 900-999 938
09 1000-1099 982
10 1100-1199 1102
11 1200-1299 1325
12 1300-1399 1541
13 1400-1799 1667
14 1800-2199 1860
15 2200-4924 2124
16 4925-7650 2483
17 7651-15000 3571
18 15001 ರಿಂದ ಮೇಲ್ಪಟ್ಟು 5358
ಬಿಯರ್ ದರ ಶೇಕಡ 185 ಏರಿಕೆ
ಬಿಯರ್ ದರವನ್ನೂ ಸರ್ಕಾರ ಇಂದಿನಿಂದ ಅನ್ವಯವಾಗುವಂತೆ ಹೆಚ್ಚಿಸಿದೆ. ಬಜೆಟ್ನಲ್ಲಿ ಘೋಷಿಸಿದ ಪ್ರಕಾರ ಅಬಕಾರಿ ಸುಂಕ ಶೇಕಡ 185 ಏರಿಕೆಯಾಗಿದೆ. ಸರ್ಕಾರದ ಅಧಿಸೂಚನೆ ಪ್ರಕಾರ, ಘೋಷಿತ ದರದ ಶೇಕಡ 185 ಅಬಕಾರಿ ಸುಂಕ ಇರಲಿದೆ.