ಬೆಂಗಳೂರು:
ವಿಧಾನಸಭೆ ಕಲಾಪದ ವೇಳೆ ಅತಿರೇಕದ ವರ್ತನೆ ತೋರಿದ ಹಿನ್ನೆಲೆಯಲ್ಲಿ ಬಿಜೆಪಿಯ ಹತ್ತು ಮಂದಿ ಶಾಸಕರನ್ನು ಬುಧವಾರ ಅಮಾನತು ಮಾಡಲಾಗಿದೆ. ಬಿಜೆಪಿಯ 10 ಶಾಸಕರನ್ನು ಅಧಿವೇಶನ ಮುಗಿಯುವವರೆಗೂ ಸ್ಪೀಕರ್ ಯು.ಟಿ. ಖಾದರ್ ಅಮಾನತು ಮಾಡಿದ್ದಾರೆ.
ಬಿಜೆಪಿ ಶಾಸಕರಾದ ಆರ್. ಅಶೋಕ, ಅಶ್ವತ್ಥನಾರಾಯಣ, ಅರವಿಂದ್ ಬೆಲ್ಲದ, ಯಶಪಾಲ ಸುವರ್ಣ, ಅರಗ ಜ್ಞಾನೇಂದ್ರ, ವೇದವ್ಯಾಸ ಕಾಮತ್, ಧೀರಜ್ ಮುನಿರಾಜು, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ ಹಾಗೂ ಸುನಿಲಕುಮಾರ ಅವರನ್ನು ಸ್ಪೀಕರ್ ಯು.ಟಿ.ಖಾದರ್ ಅಮಾನತು ಮಾಡಿದ್ದಾರೆ.
ವಿಧಾನಸಭೆ ಕಾರ್ಯವಿಧಾನ ಹಾಗೂ ನಡಾವಳಿ ನಿಯಮ 348 ಮೇರೆಗೆ ಅಮಾನತು ಮಾಡಲಾಗಿದೆ. ಈ ಪ್ರಸ್ತಾವಕ್ಕೆ ಸ್ಪೀಕರ್ ಖಾದರ್ ಅಂಗೀಕಾರ ನೀಡಿದರು ಹಾಗೂ ಸದಸ್ಯರಿಗೆ ಸದನದಿಂದ ಹೊರಗೆ ಹೋಗುವಂತೆ ಸೂಚಿಸಿದರು.
ಬಿಜೆಪಿ ಸದಸ್ಯರು ವಿಧೇಯಕಗಳ ಪ್ರತಿಗಳನ್ನು ಹರಿದು ಸ್ಪೀಕರ್ ಪೀಠದತ್ತ ಎಸೆದರು. ಸ್ಪೀಕರ್ ಪೀಠದ ಬಳಿ ಜಮಾಯಿಸಿ ಈ ವೇಳೆ ಸ್ಪೀಕರ್ ಪೀಠದಲ್ಲಿ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಮೇಲೆ ಬಿಜೆಪಿ ಸದಸ್ಯರು ಹರಿದ ಹಾಳೆಗಳನ್ನು ಎಸೆದರು.
ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಮೇಲೆ ವಿಧೇಯಕದ ಕಾಪಿಗಳನ್ನ ಹರಿದು ಎಸೆದ ಬಿಜೆಪಿ ಶಾಸಕರು ಸದನದಲ್ಲಿ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಸ್ವೀಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.