ಬೆಳಗಾವಿ :
ಖಾನಾಪುರ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ ಅವರು ಸೋಮವಾರ ವಿಧಾನಸಭೆಯಲ್ಲಿ ಖಾನಾಪುರ ತಾಲೂಕಿನ ಜನತೆ ಎದುರಿಸುತ್ತಿರುವ ಸಮಗ್ರ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಅನಾವರಣಗೊಳಿಸಿ ಗಮನ ಸೆಳೆದರು.
ಮೊದಲಿಗೆ ಅವರು ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಬ್ರಿಟಿಷರು ಗಲ್ಲು ಶಿಕ್ಷೆ ವಿಧಿಸಿದ ನಂದಗಡ ವೀರಭೂಮಿಯನ್ನು ರಾಜ್ಯ ಸರಕಾರ ಈ ಕೂಡಲೇ ಅಭಿವೃದ್ಧಿಗೊಳಿಸುವಂತೆ ಬಲವಾಗಿ ಒತ್ತಾಯಿಸಿದರು. ಛತ್ರಪತಿ ಶಿವಾಜಿ ಮಹಾರಾಜ್, ವೀರರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಖಾನಾಪುರ ಜನತೆಯ ಅವರ ಹೆಸರನ್ನು ಉಲ್ಲೇಖಿಸಿ ನಮಿಸಿದರು.
ಖಾನಾಪುರ ಜನತೆಗೆ ಕೋಟಿ ಕೋಟಿ ಪ್ರಣಾಮಗಳು. ಇಲ್ಲಿನ ಜನತೆ ದಶಕಗಳಿಂದ ಮೂಲಭೂತ ಸಮಸ್ಯೆಗಳಿಂದ ನಲುಗಿದ್ದಾರೆ. ರಾಜ್ಯ ಸರಕಾರ ಕ್ಷೇತ್ರದ ಜನತೆಗೆ ಸ್ಪಂದಿಸಬೇಕು ವಿನಂತಿಸಿಕೊಂಡರು.
ನನ್ನ ಮತ ಕ್ಷೇತ್ರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ವೀರಭೂಮಿ ಇದೆ ಎನ್ನುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟದ ಕಿಡಿ ಹೊತ್ತಿದಾಗ ವೀರ ಸಂಗೊಳ್ಳಿ ರಾಯಣ್ಣ ಅವರು ದೇಶಕ್ಕಾಗಿ ಹೋರಾಡಲು ನಿರ್ಧರಿಸಿದ್ದರು. ಆಗ ಸಂಗೊಳ್ಳಿ ರಾಯಣ್ಣ ಅವರ ಬೆನ್ನಿಗೆ ನಿಂತವರು ನನ್ನ ಖಾನಾಪುರ ಕ್ಷೇತ್ರದ ಜನತೆ ಎನ್ನುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಅತ್ಯಂತ ಐತಿಹಾಸಿಕ ಮಹತ್ವ ಹೊಂದಿರುವ ಇಂಥ ಖಾನಾಪುರ ಮತಕ್ಷೇತ್ರ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಅಭಿವೃದ್ಧಿ ಕಂಡಿಲ್ಲ. ಪ್ರಮುಖವಾಗಿ ರಾಯಣ್ಣನ ವೀರಭೂಮಿ ನಂದಗಡ ಅಭಿವೃದ್ಧಿಯಿಂದ ವಂಚಿತವಾಗಿದೆ. ಇದು ಬಹಳ ದುಃಖದ ಸಂಗತಿಯಾಗಿದೆ. ಸರಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿದರು.
ಘನತೆವೆತ್ತ ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದಂತೆ ರಾಜ್ಯ ಸರಕಾರ ಅನೇಕ ಉಚಿತ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಇದನ್ನು ನಾನು ಸ್ವಾಗತಿಸುತ್ತೇನೆ. ಆದರೆ ನಮ್ಮ ಅಳಲು ಎಂದರೆ ನನ್ನ ಖಾನಾಪುರ ಮತಕ್ಷೇತ್ರ ಮಲೆನಾಡ ಪ್ರದೇಶವಾಗಿದ್ದು, ಶೇಕಡಾ 60 ರಷ್ಟು ಕಾಡಿನಿಂದ ಕೂಡಿದೆ. ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡದಾಗಿದ್ದು ಮೂರು ಲಕ್ಷದಷ್ಟು ಜನಸಂಖ್ಯೆ ಹೊಂದಿದೆ. ನೂರಕ್ಕೂ ಅಧಿಕ ಹಳ್ಳಿಗಳು ಇವೆ. ನನ್ನ ಕ್ಷೇತ್ರ ಅನೇಕ ಸಮಸ್ಯೆಗಳಿಂದ ಕೂಡಿದೆ. ತಾಲೂಕಿನ 50 ರಿಂದ 60 ಗ್ರಾಮಗಳು ಸರಿಯಾದ ಸಂಪರ್ಕ ರಸ್ತೆ ಇಲ್ಲದೆ ಇದುವರೆಗೂ ಬಸ್ ಗಳನ್ನೇ ಕಂಡಿಲ್ಲ. ರೇಷನ್ ಕೇಂದ್ರಗಳಿಗೆ ತಲುಪುವುದೇ ದುಸ್ತರವಾಗಿದೆ. ಇದರಿಂದ ಕ್ಷೇತ್ರದ ಜನತೆ ರಾಜ್ಯ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ ಎಂದು ಅವರು ಸಮಸ್ಯೆಯನ್ನು ವಿವರಿಸಿದರು.
ಸರಕಾರದ ಉಚಿತ ಬಸ್ ಭಾಗ್ಯ ನನ್ನ ಕ್ಷೇತ್ರ ಜನತೆ ಪಡೆಯುವುದು ಹೇಗೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಆದ್ದರಿಂದ ಸರಕಾರ ಖಾನಾಪುರ ತಾಲೂಕಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸರಕಾರ ಹೆಚ್ಚಿನ ಗಮನಹರಿಸಬೇಕು ಎಂದು ಅವರು ವಿನಂತಿಸಿದರು.
ಖಾನಾಪುರ ಮತಕ್ಷೇತ್ರದ ಸುಮಾರು 60 ಹಳ್ಳಿಗಳಿಗೆ ಇಲ್ಲಿವರೆಗೆ ಸರಿಯಾಗಿ ವಿದ್ಯುತ್ ಪೂರೈಕೆ ಆಗಿಲ್ಲ. ಮಳೆಗಾಲದಲ್ಲಿ ವಿದ್ಯುತ್ ಇರುವುದಿಲ್ಲ. ನನ್ನ ಕ್ಷೇತ್ರದ ಜನತೆಗೆ ಆದ್ದರಿಂದ ಸರಕಾರ ಗೃಹ ಜ್ಯೋತಿ ಯೋಜನೆಯನ್ನು ನನ್ನ ಕ್ಷೇತ್ರದ ಜನತೆಗೆ ತಲುಪಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.