ಸತತ ನಾಲ್ಕು ವರ್ಷಗಳಿಂದ ಕಿಬ್ಬೊಟ್ಟೆಯ ನೋವಿನಿಂದ ಬಳಲುತ್ತಿದ್ದ 6೦ ವರ್ಷದ ಮಹಿಳೆಗೆ ಯಶಸ್ವಿಯಾಗಿ ಅಂಡಾಶಯದ ಗಂಟಿನ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ರೋಗಿಯ ಸುಖಕರ ಜೀವನಕ್ಕೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹೆಸರಾಂತ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ. ದರ್ಶಿತ ಶೆಟ್ಟಿ ಅವರ ನೇತ್ರತ್ವದಲ್ಲಿ ಸಫಲವಾಗಿ ಮಾಡಲಾಗಿದೆ.
ಈ ಶಸ್ತ್ರಚಿಕಿತ್ಸೆಯ ಮೂಲಕ ಸುಮಾರು 65 ಸೆಮಿ ಸುತ್ತಳತೆಯ, 3 ಕೆಜಿ ಗಿಂತಲೂ ಅಧಿಕ ತೂಕದ ಗಂಟನ್ನು 1 ಘಂಟೆಯವರೆಗೆ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಮೂಲಕ ಹೊರ ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಡಾ. ದರ್ಶಿತ ಶೆಟ್ಟಿ ಅವರು “ಗರ್ಭಾಶಯ, ಅಂಡಾಶಯ ಹಾಗೂ ಅದರ ಆಂತರಿಕ ಪರಿಸರದಲ್ಲಾಗುವ ರಾಸಾಯನಿಕ ಬದಲಾವಣೆಗಳು, ಅನುವಂಶೀಯತೆ, ಹಾರ್ಮೋನುಗಳಲ್ಲಾಗುವ ಬದಲಾವಣೆ, ಆಹಾರ ಕ್ರಮದಲ್ಲಾಗುವ ಏರಿಳಿತಗಳು, ಆರೋಗ್ಯದ ಅಲಕ್ಷ್ಯತೆ ಮುಂತಾದ ಕಾರಣಗಳಿಂದ ಈ ತೆರನಾದ ಗಂಟುಗಳಿಂದ ಮಹಿಳೆಯರು ಸಮಸ್ಯೆಗೆ ಗುರಿಯಾಗುತ್ತಾರೆ. ಕಾಲಕಾಲಕ್ಕೆ ವೈದ್ಯರ ತಪಾಸಣೆ ಸಮಸ್ಯೆಗಳು ಉಲ್ಭಣಗೊಳ್ಳುವುದಕ್ಕಿಂತ ಮುಂಚೆಯೇ ತಪಾಸಣೆಗೊಳಪಟ್ಟು ತಕ್ಕ ಚಿಕಿತ್ಸೆಯನ್ನು ಹೊಂದಿದರೆ ಆರೋಗ್ಯಯುತ ಜೀವನ ನಡೆಸಬಹುದಾಗಿದೆ” ಎಂದು ಹೇಳಿದರು.
ವೈದ್ಯರ ತಂಡ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತ ಮಾತನಾಡಿದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್. ಸಿ.ಧಾರವಾಡ ಅವರು “ಇಂತಹ ಸಮಸ್ಯೆ ಗಳು ಪ್ರತಿ 1೦೦೦ ಮಹಿಳೆಯರಲ್ಲಿ 2೦ ರಿಂದ 3೦ ಜನ ಮಹಿಳೆಯರಲ್ಲಿ ಇಂತಹ ಸಮಸ್ಯೆಗಳನ್ನು ಕಾಣಬಹುದಾಗಿದೆ. ಆದರೆ ಇಷ್ಟುದೊಡ್ಡ ಗಂಟುಇರುವದು ಅಪರೂಪವಾಗಿದೆ. ಆದರೆ ಸಕಾಲಕ್ಕೆ ವೈದ್ಯರನ್ನು ಕಂಡು ತಪಾಸಣೆಗೊಳಪಟ್ಟಲ್ಲಿ ಇಂತಹ ಸಮಸ್ಯೆಗಳಿಂದ ದೂರವಿರಬಹುದಾಗಿದೆ” ಎಂದು ತಿಳುವಳಿಕೆ ನೀಡಿದರು.
ಈ ಶಸ್ತ್ರ ಚಿಕಿತ್ಸೆಯನ್ನು ಡಾ. ದರ್ಶಿತ ಶೆಟ್ಟಿ ಅವರ ನೇತೃತ್ವದಲ್ಲಿ, ಡಾ. ಕೆ.ಎನ್. ಹೋಳಿಕಟ್ಟಿ ಹಾಗೂ ಡಾ. ಅಮೃತಾ ಸಾಲ್ಕರ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ. ಆರ್. ಜಿ. ನೆಲವಿಗಿ ಅವರ ತಂಡ ಕಾರ್ಯದಲ್ಲಿ, ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗದಲ್ಲಿ ಮುಖ್ಯಸ್ಥೆ ಡಾ. ರಾಜೇಶ್ವರಿ ಕಡಕೋಳ ಹಾಗೂ ಹಿರಿಯ ಶಸ್ತ್ರ ಚಿಕಿತ್ಸಜ್ಞ ಡಾ. ಅಶೋಕ ಪಾಂಗಿ ಇವರ ಮೇಲ್ವಿಚಾರಣೆಯಲ್ಲಿ ಮಾಡಲಾಯಿತು.
ಇಂತಹ ಕಷ್ಟಕರವಾದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ ವೈದ್ಯರ ತಂಡವನ್ನು ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ. ಹೆಚ್.ಬಿ. ರಾಜಶೇಖರ ಅವರು ಹಾಗೂ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರು ಅಭಿನಂದಿಸಿ ಸಂತಸ ವ್ಯಕ್ತಪಡಿಸಿದ್ದಾರೆ.