ಬೆಂಗಳೂರು:
ರಾಜ್ಯದ ಬಡ ಜನರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆ ಜಾರಿಯನ್ನು ಸಹಿಸಲಾಗದೇ ಅಸೂಯೆಯಿಂದ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ಅನ್ನಭಾಗ್ಯ ಯೋಜನೆ ವಿಚಾರವಾಗಿ ಚರ್ಚೆ ಆರಂಭವಾದಾಗ ಬಿಜೆಪಿ ನಾಯಕರು ಅಪಸ್ವರ ಎತ್ತಿ, ಕಲಾಪ ಬಹಿಷ್ಕರಿಸಿ ಹೊರ ನಡೆಯುವಾಗ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
“ಬಡವರ ಪರವಾಗಿ ನಾವು ಜಾರಿಗೆ ತಂದಿರುವ ಅನ್ನಭಾಗ್ಯ ಕಾರ್ಯಕ್ರಮವನ್ನು ಬಿಜೆಪಿ ಸಹಿಸುತ್ತಿಲ್ಲ. ಭಾರತೀಯ ಆಹಾರ ನಿಗಮದ ಗೋದಾಮಿನಲ್ಲಿ ಮೇ ಅಂತ್ಯದ ವೇಳೆಗೆ 7 ಲಕ್ಷ ಟನ್ ಅಕ್ಕಿ ದಾಸ್ತಾನು ಇದ್ದರೂ ರಾಜ್ಯಕ್ಕೆ 1.66 ಲಕ್ಷ ಟನ್ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದೆ. ಬಡವರಿಗೆ ತಿನ್ನಲು ಅನ್ನ ನೀಡದೇ ಬೇರೆ ಉತ್ಪನ್ನಗಳನ್ನು ತಯಾರು ಮಾಡಲು ಖಾಸಗಿಯವರಿಗೆ ಅಕ್ಕಿ ಮಾರಲು ಹೊರಟಿದ್ದಾರೆ. ಇದರಿಂದ ಬಿಜೆಪಿ ಬಡವರ ವಿರೋಧಿ ಎಂಬುದು ಸಾಬೀತಾಗಿದೆ ಎಂದು ಹೇಳಿದರು.
ಬಿಜೆಪಿಯವರು ಪ್ರತಿಭಟನೆ ಮಾಡಿ, ಸಭಾತ್ಯಾಗ ಮಾಡಿ ಹೋದರೆ ನಮಗೂ ಸಮಾಧಾನವೇ. ಕಾರಣ, ನಮ್ಮ ಸರ್ಕಾರ ಜನರ ಹಸಿವನ್ನು ನೀಗಿಸಲು ತೆಗೆದುಕೊಂಡಿರುವ ಕಾರ್ಯಕ್ರಮವನ್ನು ಅವರೇ ಪ್ರಚಾರ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಈ ಹಿಂದೆ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮೊದಲ ದಿನವೇ ರಾಜ್ಯದ ಜನರು ಹಸಿವಿನಿಂದ ಇರಬಾರದು ಎಂದು ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದ್ದರು. ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದವರು ಯಾರು? ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷರಾಗಿ, ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಅದನ್ನು ಜಾರಿಗೆ ತರಲಾಗಿತ್ತು. ಈ ಕಾಯ್ದೆ ಮೂಲಕ ಜನರಿಗೆ 3 ರೂ.ಗೆ ಅಕ್ಕಿ ಸಿಗುವಂತೆ ಮಾಡಿದರು. ನಮ್ಮ ಸರ್ಕಾರ ಜನರಿಂದ 3 ರೂ. ಕೂಡ ಪಡೆಯಬಾರದು ಉಚಿತವಾಗಿ ನೀಡೋಣ ಎಂದು ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆವು.
ನಮ್ಮ ಸರ್ಕಾರ ಆರಂಭದಲ್ಲಿ 5 ಕೆ,ಜಿ ಅಕ್ಕಿ ನೀಡುತ್ತಿತ್ತು, ನಂತರ ಅದನ್ನು 7 ಕೆ.ಜಿಗೆ ಏರಿಕೆ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಅದನ್ನು ಮತ್ತೆ 5 ಕೆ.ಜಿಗೆ ಇಳಿಸಿತು. ಆಗ ಜನ ಯಾವ ಕಾರಣಕ್ಕೆ ಕಡಿಮೆ ಮಾಡಿದ್ದಾರೆ ಎಂದು ಕೇಳಿದಾಗ, ನಾವು ವಿರೋಧ ಪಕ್ಷವಾಗಿ ಅಧಿಕಾರಕ್ಕೆ ಬಂದರೆ 10 ಕೆ.ಜಿ ನೀಡುತ್ತೇವೆ ಎಂದು ತಿಳಿಸಿದರು. ಇವರು ಸಹಕಾರ ನೀಡಲಿ ಅಥವಾ ನೀಡದೇ ಇರಲಿ ನಮಗೆ ಸಾಮಾಜಿಕ ಬದ್ಧತೆ ಇದೆ ಎಂದು ಹೇಳಿದರು.
ಮಂಗಳೂರಿನ ಭಾಗದ ಜನ ಆ ಭಾಗದ ಅಕ್ಕಿ ಕೇಳಿದರೆ, ಉತ್ತರ ಕರ್ನಾಟಕ ಭಾಗದ ಜನ ಜೋಳ ಕೇಳುತ್ತಿದ್ದಾರೆ. ಹಳೇ ಮೈಸೂರು ಭಾಗದ ಜನ ರಾಗಿ ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ 10 ಕೆ.ಜಿ ಆಹಾರ ಧಾನ್ಯ ನೀಡಲು ಬದ್ಧವಾಗಿದೆ. ಬಡವರಿಗೆ ನೆರವಾಗಲಿ ಎಂದು ನಾವು ಅವರಿಗೆ ಒಂದು ಅವಕಾಶ ನೀಡಿದೆವು.
ನಮ್ಮ ಈ ಯೋಜನೆ ಕೇವಲ ಒಂದು ಜಾತಿ, ಧರ್ಮ, ಪಂಗಡಕ್ಕೆ ಮಾತ್ರವಲ್ಲ. ಎಲ್ಲಾ ಜಾತಿ ಧರ್ಮದವರಿಗೂ ಈ ಯೋಜನೆ ಲಾಭ ಸಿಗುತ್ತದೆ. ಈ ಯೋಜನೆಯ ಎಲ್ಲಾ ಫಲಾನುಭವಿಗಳಿಗೂ 10 ಕೆ.ಜಿ ನೀಡುತ್ತೇವೆ. ಬೇರೆ ರಾಜ್ಯಗಳಿಂದ ಖರೀದಿ, ಮುಕ್ತ ಮಾರುಕಟ್ಟೆಯಲ್ಲಿ ಖರೀದಿ, ನಮ್ಮ ರೈತರಿಗೆ ಅಕ್ಕಿ ಬೆಳೆಯಲು ಅವಕಾಶ ನೀಡಿ ಅವರಿಂದ ಖರೀದಿ ಮಾಡುವ ಅವಕಾಶ ನಮ್ಮ ಮುಂದೆ ಇದೆ.
ಬಿಜೆಪಿ ನಾಯಕರಿಗೆ ನಮ್ಮ ಯೋಜನೆ ಜಾರಿ ವಿಚಾರವಾಗಿ ಅಸೂಯೆ ಹೆಚ್ಚಾಗಿದೆ. ಅವರು ಹೊಟ್ಟೆಕಿಚ್ಚಿನಿಂದ ಈ ರೀತಿ ವರ್ತಿಸುತ್ತಿದ್ದಾರೆ. ಇವರು ಬಡ ವಿರಧಿ, ಭ್ರಷ್ಟ ಸರ್ಕಾರ ಎಂದು ರಾಜ್ಯದ ಜನ ಇವರನ್ನು ಅಧಿಕಾರದಿಂದ ಕಿತ್ತೊಗೆದಿದ್ದು, ಇವರನ್ನು ಮತ್ತೆ ಎಂದಿಗೂ ಕ್ಷಮಿಸುವುದಿಲ್ಲ. ನಮಗೆ ರಾಜ್ಯದ ಜನರ ಬಗ್ಗೆ ಬದ್ಧತೆ ಇದೆ. ನಾವು ರಾಜ್ಯದ ಜನರಿಗೆ ನೀಡಿರುವ ಐದು ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ಜಾರಿ ಮಾಡದಿದ್ದರೆ ಮತ್ತೆ ಅವರ ಮುಂದೆ ಹೋಗಿ ಮತ ಕೇಳುವುದಿಲ್ಲ.” ಎಂದು ಹೇಳಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಉತ್ತರಗಳು:
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪರಿಷತ್ ಸದಸ್ಯರಾದ ಮರಿತಿಬ್ಬೆ ಗೌಡರು ಬಿಡಿಎ ಸ್ವಾಮ್ಯದ ಸ್ವತ್ತನ್ನು ಮೆಟ್ರೋ ಕಾಮಗಾರಿಗೆ ಭೂಸ್ವಾಧೀನ ಮಾಡಿರುವ ಜಾಗಕ್ಕೆ ಖಾಸಗಿಯವರಿಗೆ 24 ಕೋಟಿ ಪರಿಹಾರ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು,
‘ಈ ಸ್ವತ್ತನ್ನು ಬಿಡಿಎ ಸ್ವಾಧೀನಕ್ಕೆ ಬಂದ ನಂತರ ಬಿಎಂಆರ್ ಸಿಎಲ್ ಮೆಟ್ರೋ ಕಾಮಗಾರಿಗೆ ಭೂಸ್ವಾಧೀನ ಮಾಡಿಕೊಂಡಿದೆ ಎಂದು ನಮ್ಮ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಖಾಸಗಿಯವರ ಭೂಸ್ವಾಧೀನವಾಗಿದ್ದರೆ ಅವರಿಗೆ ಪರಿಹಾರ ನೀಡಲಾಗುತ್ತದೆ. ಒಂದು ವೇಳೆ ಸರ್ಕಾರಿ ಜಮೀನು ಸ್ವಾಧೀನಕ್ಕೆ ಖಾಸಗಿಯವರಿಗೆ ಪರಿಹಾರ ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಖಂಡಿತವಾಗಿ ತನಿಖೆ ಮಾಡಲಾಗುವುದು. ನಿಮ್ಮ ಬಳಿ ಏನೇ ದಾಖಲೆಗಳಿದ್ದರೂ ನಮಗೂ ನೀಡಿ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಹಣ ಬೇರೆಯವರು ಪಡೆದಿದ್ದರೆ ಅದರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಐವರು ದಕ್ಷ ಅಧಿಕಾರಿಗಳ ಟಾಸ್ಕ್ ಫೋರ್ಸ್ ರಚನೆ ಸ್ವಾಗತಾರ್ಹ. ಇದೇ ಟಾಸ್ಕ್ ಫೋರ್ಸ್ ಅನ್ನು ಬಿಡಿಎ ವ್ಯಾಪ್ತಿಗೂ ವಿಸ್ತರಿಸಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಆಗಿರುವ ಅಕ್ರಮಗಳ ತನಿಖೆ ಮಾಡಿಸಬೇಕು ಎಂದು ಸದಸ್ಯ ಮರಿತಿಬ್ಬೆಗೌಡರು ಮನವಿ ಮಾಡಿದರು. ಈ ಮನವಿಗೆ ಸ್ಪಂದಿಸಿದ ಉಪಮುಖ್ಯಮಂತ್ರಿಗಳು,
‘ನಾನು ಟಾಸ್ಕ್ ಫೋರ್ಸ್ ರಚಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೆ. ಅಷ್ಟರಲ್ಲಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಬೆಂಗಳೂರಿನ ಶಾಸಕರೊಬ್ಬರು ಕೇವಲ ನನ್ನ ಕ್ಷೇತ್ರದಲ್ಲಿ ಮಾತ್ರ ಯಾಕೆ ಇಡೀ ಬೆಂಗಳೂರಿನಲ್ಲಿ ತನಿಖೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇಂದು ಟಾಸ್ಕ್ ಫೋರ್ಸ್ ರಚನೆ ಬಗ್ಗೆ ತೀರ್ಮಾನ ಮಾಡುತ್ತೇನೆ. ನೀವು ಹೇಳಿರುವ ಪ್ರಕರಣದ ಬಗ್ಗೆ ಲಿಖಿತ ರೂಪದಲ್ಲಿ ಪತ್ರ ಬರೆದು ಕೊಡಿ. ಈ ವಿಚಾರವಾಗಿಯೂ ತನಿಖೆ ಮಾಡಿಸಲಾಗುವುದು’ ಎಂದು ತಿಳಿಸಿದರು.
ನಂತರ ಪರಿಷತ್ ಸದಸ್ಯ ಹನುಮಂತ ನಿರಾಣಿ ಅವರು ಕೆಬಿಜೆಎನ್ಎಲ್ ಮತ್ತು ಕೆಎನ್ಎಲ್ ನಿಗಮಗಳಲ್ಲಿ ಎಸ್ ಸಿಪಿ ಟಿಎಸ್ಪಿ ಯೋಜನೆ ಅಡಿಯಲ್ಲಿ ಬಾಗಲಕೋಟೆಯಲ್ಲಿ 608 ಪೈಕಿ 91 ಕೊಳವೆಬಾವಿ ಟೆಂಡರ್ ಹಂತದಲ್ಲಿದ್ದು, ಉಳಿದ ಕೊಳವೆಬಾವಿ ಟೆಂಡರ್ ಆಗಿದೆ. ಆದಷ್ಟು ಬೇಗ ಈ ಕೊಳವೆ ಬಾವಿ ತೆಗೆದು ಫಲಾನುಭವಿಗಳಿಗೆ ನೀಡಬೇಕು ಎಂದು ಕೇಳಿದಾಗ,
‘ಈ ಭಾಗದಲ್ಲಿ 608 ಕೊಳವೆಬಾವಿ ಕೊರೆಯಲು ತೀರ್ಮಾನಿಸಲಾಗಿದ್ದು, 91 ಪ್ಯಾಕೇಜ್ ಗಳನ್ನು ನಿಗದಿ ಮಾಡಲಾಗಿದೆ.ಕೆಲವು ಕೊರೆಯಲಾಗಿದ್ದು, ಮತ್ತೆ ಕೆಲವು ಕೊರೆಯಲಾಗಿಲ್ಲ. ಸರ್ಕಾರದಿಂದ ಕೊರೆಯದಂತೆ ಸುತ್ತೋಲೆ ಹೋಗಿದ್ದ ಕಾರಣ ತಡವಾಗಿದ್ದು, ನಿಯಮಾನುಸಾರ ಈ ಕಾಮಗಾರಿ ಮುಕ್ತಾಯಗೊಳಿಸಲು ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಇನ್ನು ಯುಕೆಪಿ ಸಾಮರ್ಥ್ಯ ಹೆಚ್ಚಳಕ್ಕೆ ಭೂಸ್ವಾದೀನದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,
‘ಬೊಮ್ಮಾಯಿ ಅವರ ಸರ್ಕಾರ ಈ ಯೋಜನೆಗೆ 5 ಸಾವಿರ ಕೋಟಿ ನೀಡುವುದಾಗಿ ಬಜೆಟ್ ನಲ್ಲಿ ಹೇಳಿತ್ತು. ಆದರೆ ಹಣ ನಿಗದಿ ಮಾಡುವಾಗ 1200 ಕೋಟಿ ನೀಡಿತ್ತು. ನಮ್ಮ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ ನಲ್ಲಿ ಅಷ್ಟೇ ಮೊತ್ತವನ್ನು ಮುಂದುವರಿಸಿದೆ. ಈ ಅನುದಾನ ಯೋಜನೆಗೆ ಸಾಲುವುದಿಲ್ಲ. ಈಗ ನೀಡಲಾಗಿರುವ ಹಣವನ್ನು ಪೂರೈಸಲಾಗುವುದು. ಈ ಯೋಜನೆಗೆ ಭೂಸ್ವಾಧೀನ ತಡವಾದಷ್ಟು ಬೆಲೆ ಹೆಚ್ಚಾಗಿ ಸರ್ಕಾರಕ್ಕೆ ಹೊರೆಯಾಗುತ್ತಿದೆ. ಆದಷ್ಟು ಬೇಗ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಾವು ನಮ್ಮ ಪ್ರಣಾಳಿಕೆಯಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾವು ಗ್ಯಾರಂಟಿ ಯೋಜನೆಗಳ ಜಾರಿ ಜತೆಗೆ ಈ ಯೋಜನೆಗಳನ್ನು ನಿಭಾಯಿಸಬೇಕಿದೆ. ಮುಂದಿನ ದಿನಗಳಲ್ಲಿ ನೀರಾವರಿಗೆ ಹೆಚ್ಚಿನ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸುತ್ತೇವೆ. ಈ ಯೋಜನೆ ರಾಷ್ಟ್ರೀಯ ಯೋಜನೆ ಮಾಡಬೇಕು ಎಂದು ಬೇಡಿಕೆ ಇದೆ. ಕೇಂದ್ರ ಸರ್ಕಾರ ಈ ವಿಚಾರವಾಗಿ ನೋಟಿಫಿಕೇಷನ್ ಹೊರಡಿಸುತ್ತಿಲ್ಲ. ಕೇಂದ್ರ ಸರ್ಕಾರ ಆಂಧ್ರಪ್ರದೇಶಕ್ಕೆ ಕೊಟ್ಟಂತೆ ನಮಗೂ ಸಹಕಾರ ನೀಡಿದ್ದರೆ ಇದಕ್ಕೆ ಈಗಾಗಲೇ ರೂಪ ಸಿಗುತ್ತಿತ್ತು. 26 ಸಂಸದರು ಸೇರಿ ಕೇಂದ್ರ ಮೇಲೆ ಒತ್ತಡ ಹಾಕಿ ನಮಗೆ ಸಹಕಾರ ನೀಡಿ. ಈ ವಿಚಾರದಲ್ಲಿ ರಾಜಕೀಯ ಬದ್ಧತೆ ಕೂಡ ಬೇಕಿದೆ. ಆದ್ಯತೆ ಮೇರೆಗೆ ನೀರಾವರಿ ಯೋಜನೆಗಳ ಜಾರಿ ಮಾಡಲಾಗುವುದು’ ಎಂದು ತಿಳಿಸಿದರು.
ಸದಸ್ಯ ಶರವಣ ಅವರು ಬಿಡಿಎ ನಿವೇಶನ ಹಂಚಿಕೆ ಭ್ರಷ್ಟಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿಗಳು.
‘ಅಧಿಕಾರಿಗಳು ನೀಡಿರುವ ಮಾಹಿತಿಯನ್ನು ನಿಮಗೆ ನೀಡಿದ್ದು, ಬದಲಿ ನಿವೇಶನ ಯಾರಿಗೆ ನೀಡಲಾಗಿದೆ ಎಂಬ ಪಟ್ಟಿಯೂ ನೀಡಲಾಗಿದೆ. ಇಲ್ಲಿ ಆಗಿರುವ ತಪ್ಪಿನ ಬಗ್ಗೆ ನನ್ನ ಗಮನ ಸೆಳೆದಿದ್ದೀರಿ. ನಿವೇಷನ ಹಂಚಿಕೆಯಲ್ಲಿ ತಾಂತ್ರಿಕ ವಿಚಾರಗಳಿವೆ. ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಲುವುದು ಸಹಜ. ನಿಮ್ಮ ಬಳಿ ಇರುವ ಎಲ್ಲಾ ಮಾಹಿತಿಗಳನ್ನು ನಮಗೆ ನೀಡಿ. ಅದರಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಯಾರೇ ತಪ್ಪು ಮಾಡಿದ್ದರೂ ಅದನ್ನು ಬಯಲಿಗೆಳೆಯೋಣ’ ಎಂದು ತಿಳಿಸಿದರು.