ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ರಾಜಕೀಯ ಜೀವನ ಮುಗಿಸಲು ಕೇಂದ್ರ ಸರ್ಕಾರ ಪಿತೂರಿ ರೂಪಿಸಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇಂದು ಮೌನ ಪ್ರತಿಭಟನೆ ನಡೆಸಿತು.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಬಾಯಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಪಾಲ್ಗೊಂಡರು.
ಈ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮಂತ್ರಿಗಳಾದ ಕೆ ಎಚ್ ಮುನಿಯಪ್ಪ, ರಾಮಲಿಂಗಾರೆಡ್ಡಿ, ಬೋಸರಾಜ್, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು, ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿ ರಾಹುಲ್ ಗಾಂಧಿಯವರಿಗೆ ಬೆಂಬಲ ವ್ಯಕ್ತಪಡಿಸಿದರು.
“ಮೊಳಗಲಿ ಮೊಳಗಲಿ ಸತ್ಯದ ಘರ್ಜನೆ ಮೊಳಗಲಿ, ಕುತಂತ್ರದಿಂದ ಸತ್ಯವನ್ನು ಮುಚ್ಚಿಡಲಾಗದು, ಕುತಂತ್ರಿ ಬಿಜೆಪಿಗೆ ಧಿಕ್ಕಾರ, ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ” ಎಂಬಿತ್ಯಾದಿ ಭಿತ್ತಿ ಪತ್ರಗಳನ್ನು ಹಿಡಿದಿದ್ದರು.