ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಕಸಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರದ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಕೃಪೆಯಿಂದಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಸಮಾಜದ ದುರ್ಬಲರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಪಾಲಿನ ಪುಣ್ಯವೇ ಸರಿ. ಇದನ್ನು ಅಧಿಕಾರ ಎಂದು ಪರಿಗಣಿಸದೆ ಸೇವೆಗೆ ಸಿಕ್ಕ ಅವಕಾಶ ಎಂದೇ ಭಾವಿಸಿ ಮುಂದಿನ ದಿನಗಳಲ್ಲಿ ಕ್ಷೇತ್ರ ಮತ್ತು ಇಡೀ ರಾಜ್ಯದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ಅವರು ಚುನಾವಣೆಗೆ ಮೊದಲು ನೀಡಿರುವ ಎಲ್ಲ ಭರವಸೆಗಳನ್ನು ಚಾಚೂ ತಪ್ಪದೆ ಈಡೇರಿಸುತ್ತೇವೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಈ ಸಂಬಂಧ ಯಾವುದೇ ವದಂತಿಗಳಿಗೆ ಯಾರೂ ಕಿವಿಗೊಡುವುದು ಬೇಡ ಎಂದು ಅವರು ವಿನಂತಿಸಿದರು.
ಮನೋಹರ ಬೆಳಗಾಂವ್ಕರ್, ಪೂಜಾ ಸುತಾರ, ಯಲ್ಲಪ್ಪ ಡೇಕೊಳ್ಕರ್, ನಿಂಗಪ್ಪ ಮೊರೆ, ಡಾಕಳು ಪಾಟೀಲ, ಕಾಶೀನಾಥ್ ಮೊರೆ, ಲಕ್ಷ್ಮೀ ಪಾಟೀಲ, ಮಂಜುಳಾ ಕಾಂಬಳೆ, ಮಹೇಶ ಪಾಟೀಲ, ಗಾಯತ್ರಿ ಸುತಾರ, ಬಬ್ಲು ನಾವಗೇಕರ್, ಸಾಗರ ನಾಯ್ಕ್, ಸಾತಪ್ಪ ಪಾಟೀಲ, ವಿಲಾಸ ಪಾಟೀಲ, ಲಕ್ಷ್ಮಣ ಕಾಂಬಳೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.