ಮುಂಡರಗಿ :
ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸಾಹಿತ್ಯ ಅದು ನಿಜವಾಗಿಯೂ ಲಿಂಗ ಸಾಹಿತ್ಯ. ಮನದ ಕಾಳಿಕೆ ತೊಳೆಯುವ ಪವಿತ್ರ ಜ್ಞಾನಗಂಗೆ. ಪೂಜ್ಯರು ತಮ್ಮ ಸಾಹಿತ್ಯದ ಮೂಲಕ ನೀಡಿದ ಸಂದೇಶ ಆಸ್ತಿಕ ಜನರಿಗೆ ತಲುಪಿಸುವ ಉದ್ದೇಶದಿಂದ, ಪೂಜ್ಯರ ಅಭಿಮಾನಿ ಭಕ್ತರ ಮಹಾಬಳಗವಾದ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯು ಪೂಜ್ಯರ ಸಾಹಿತ್ಯ ಪ್ರಚಾರದ ಅಕ್ಷರ ದಾಸೋಹ ಕಾಯಕ ಕೈಗೆತ್ತಿಕೊಂಡು, ‘ಸಾವಿರದ ಸಾಹಿತ್ಯ ಸಾವಿರ ಮನೆ ಮನಗಳಿಗೆ’ ಪುಟ್ಟರಾಜ ಸಾಹಿತ್ಯ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ, ಈ ಅಭಿಯಾನಕ್ಕೆ ಆಯ್ಕೆ ಮಾಡಿಕೊಂಡ ಕೃತಿ ‘ಗುರು ವಚನ ಪ್ರಭಾ’ ವಚನ ಸಂಕಲನ. ಬಸವಾದಿ ಶರಣರಿಂದ ಆರಂಭಗೊಂಡ ವಚನಾ ಸಾಹಿತ್ಯ ಪರಂಪರೆ ಮುಂದು ವರಿಸಿಕೊಂಡು ಬಂದ ಸಾಹಿತ್ಯ ಕೃತಿ ಇದಾಗಿದೆ.
ಇಲ್ಲಿನ ವಚನಗಳು ಪೂಜ್ಯರು ತಮ್ಮ ಲಿಂಗಪೂಜಾ ಸಮಯದಲ್ಲಿ, ಗುರು ಕುಮಾರ ಪಂಚಾಕ್ಷರೇಶ್ವರ ಅಂಕಿತ ನಾಮದಿಂದ ರಚಿಸಿದ ಲಿಂಗನುಡಿಯಾಗಿ ಅರಳಿದ ಪುಷ್ಪಗಳಾಗಿವೆ. ಈ ಅಪರೂಪದ ವಚನಗಳನ್ನು ವಿಶ್ಲೇಷಿಸಿ ಸರಣಿ ರೂಪದಲ್ಲಿ ಅವುಗಳನ್ನು ಪ್ರಕಟಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ.
ಈ ಯೋಜನೆ ಭಾಗವಾಗಿ ಹಿರಿಯ ಮತ್ತು ಯುವ ಬರಹಗಾರರಿಂದ ವಿಶ್ಲೇಷಿಸಿದ ಲೇಖನಗಳನ್ನು ವೇ. ಚನ್ನವೀರ ಸ್ವಾಮಿ ಹಿರೇಮಠ (ಕಡಣಿ) ಸಂಪಾದಿಸಿದ್ದಾರೆ. ಸೇವಾ ಸಮಿತಿಯ ಗುರು ಕುಮಾರ ಪಂಚಾಕ್ಷರ ಪ್ರಕಾಶನ ಸಂಸ್ಥೆ ಈ ಕೃತಿ ಪ್ರಕಟಿಸಿದೆ. ಸೇವಾ ಸಮಿತಿ ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಗುರು ಪುಟ್ಟರಾಜರ ಹುಟ್ಟು ಹಬ್ಬದ ಸಮಾರಂಭದಲ್ಲಿ, ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಡಾ. ಕಲ್ಲಯ್ಯಜ್ಜನವರ ಸಮ್ಮುಖದಲ್ಲಿ ಶ್ರೀ ಮ. ನಿ. ಪ್ರ. ಜಗದ್ಗುರು ‘ನಾಡೋಜ’ ಡಾ. ಅನ್ನದಾನೇಶ್ವರ ಮಹಾಸ್ವಾಮಿಗಳ ಲಿಂಗ ಹಸ್ತದಿಂದ ಲೋಕಾರ್ಪಣೆಯಾಗಿದೆ.
ಈಗ ಕೃತಿ ನಾಡಿನ ಪೂಜ್ಯರ ಅಭಿಮಾನಿ ಭಕ್ತರ ಮನೆ ಮನಗಳಿಗೆ ಉಚಿತವಾಗಿ ತಲುಪಿಸುವ ಅಭಿಯಾನಕ್ಕೆ, ಶ್ರೀಮದ್ ಕಾಶಿ ಜ್ಞಾನಸಿಂಹಾಸನದೀಶ್ವರ ೧೦೦೮ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವದ್ಪಾದಂಗಳವರು, ‘ಧರ್ಮ ಪ್ರಕಾಶ’ ಮಹಾದಾನಿ ಜಗದೀಶ್ ಕುಡುಗುಂಟಿ ಶಾಸಕರು ಜಮಖಂಡಿ, ಕಾಶಿಪೀಠದ ವೇದಾಗಮ ಸಂಸ್ಕೃತ ಪಾಠಶಾಲೆಯ ಪ್ರಾಧ್ಯಾಪಕ ಪಂ. ಗುರುಸಿದ್ಧಯ್ಯ ಹಿರೇಮಠ ಇವರನ್ನು ಒಳಗೊಂಡಂತೆ ಐದು ಜನರಿಗೆ ಉಚಿತವಾಗಿ ನೀಡು ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಕೃತಿ ಸಂಪಾದಕ ವೇದ ಮೂರ್ತಿ ಚೆನ್ನವೀರ ಸ್ವಾಮೀಜಿ ಹಿರೇಮಠ (ಕಡಣಿ) ಇವರಿಗೆ ಜಗದ್ಗುರು ಸನ್ನಿಧಿಯವರು ಗುರುರಕ್ಷೆ ದಯಪಾಲಿಸಿ ಆಶೀರ್ವದಿಸಿದರು.
ಈ ಸಮಾರಂಭದಲ್ಲಿ ಪೂಜ್ಯ ಡಾ. ಕಲ್ಲಯ್ಯ ಅಜ್ಜನವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಎಂದು ರಾಜ್ಯ ಕಾರ್ಯದರ್ಶಿ ಪ್ರೊ. ಮಂಜುಶ್ರೀ ಹಾವಣ್ಣವರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ