ಬೆಳಗಾವಿ :
ಚಿಕ್ಕಮಕ್ಕಳಿಗೆ ಬಾಲ್ಯದಲ್ಲಿಯೇ ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರ ನೀಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ ಎಂದು ಜೈನ ಮುನಿ ಶ್ರೀ 108 ಪ್ರಸಂಗಸಾಗರಜೀ ಮಹಾರಾಜರು ಹೇಳಿದರು.
ಬೆಳಗಾವಿಯ ಮಹಾವೀರ ಭವನದಲ್ಲಿ ಶುಕ್ರವಾರ ಮಧ್ಯಾಹ್ನ ತಮ್ಮ ವರ್ಷಾಯೋಗ ಚಾರ್ತುಮಾಸ್ಯ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಮಂಗಲ ಕಳಶ ಸ್ಥಾಪನೆ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿದ ಅವರು, ಬಾಲ್ಯದಲ್ಲಿ ಚಿಕ್ಕಮಕ್ಕಳ ಮನಸ್ಸು ಕೋಮಲವಾಗಿರುತ್ತದೆ. ಬಾಲ್ಯದಲ್ಲಿ ಯಾವ ಶೀಕ್ಷಣ ಪಡೆಯುತ್ತಾರೆಯೋ ಅವರು ಅದನ್ನೆ ಮುಂದುವರೆಸುತ್ತಾರೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಮತ್ತು ಧಾರ್ಮಿಕ ಸಂಸ್ಕಾರ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಇದೀಗ ತಮ್ಮ ಹದಿಮೂರನೇ ಚಾರ್ತುಮಾಸ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಈ ನಾಲ್ಕು ತಿಂಗಳ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಬರಬೇಕೆಂದು ತಿಳಿಸಿದ ಅವರು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ದೊರಕುವ ಜೊತೆಗೆ ಆತ್ಮ ಕಲ್ಯಾಣದತ್ತ ಚಿತ್ತ ಹರಿಯುತ್ತದೆ ಎಂದು ಅವರು ಹೇಳಿದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿಯಲ್ಲಿ ಬಹುದಿನಗಳ ನಂತರ ಪ್ರಭಾವಶಾಲಿ ಮುನಿಗಳ ಆಗಮನವಾಗಿದ್ದು, ಈ ಮುನಿಗಳ ನೇತೃತ್ವದಲ್ಲಿ ಅನೇಕ ಕಾರ್ಯಕ್ರಮಗಳು, ಪಾಠಶಾಲೆಗಳ ಆರಂಭ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಪುಣ್ಯದ ಕೆಲಸ .ಹಾಗಾಗಿ ಎಲ್ಲರೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಅವರು ಹೇಳಿದರು.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿದರು. ಸಮಾರಂಭದಲ್ಲಿ ಮಂಗಲ ಕಳಶಗಳ ಸವಾಲು ಕಾರ್ಯಕ್ರಮ, ಸಂಗೀತಾರತಿ, ಶ್ರೀಗಳ ಪಾದಪೂಜೆ, ಧಾರಿಣಿ ಮಹಿಳಾ ಮಂಡಳದ ವತಿಯಿಂದ ಆರತಿ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ಉದ್ಯಮಿಗಳಾದ ಗೋಪಾಲ ಜಿನಗೌಡ, ಸಚಿನ ಪಾಟೀಲ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಮನೋಜ ಸಂಚೇತಿ, ಸುನಿಲ ಕಟಾರಿಯಾ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಚಾರ್ತುಮಾಸ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ರವಿರಾಜ ಪಾಟೀಲ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಪ್ರಮೊದ ಪಾಟೀಲ ವಂದಿಸಿದರು.