ಬೆಳಗಾವಿ :
ಮುಂಗಾರು ಮಳೆಯ ವಿಫಲತೆಯಿಂದಾಗಿ ಆಲಮಟ್ಟಿ, ಮಲಪ್ರಭಾ, ಹಿಪ್ಪರಗಿ ಮತ್ತು ಹಿಡಕಲ್ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕಡಿಮೆಯಾಗಿರುವುದರಿಂದ ಜಲಾಶಯಗಳಲ್ಲಿ ಸಂಗ್ರಹಿತ ನೀರನ್ನು ವ್ಯವಸ್ಥಿತವಾಗಿ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಬೇಕು ಎಂದು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಗುರುವಾರ(ಜು.6) ನಡೆದ ಆಲಮಟ್ಟಿ ಜಲಾಶಯ, ಮಲಪ್ರಭಾ ಯೋಜನೆ , ಘಟಪ್ರಭಾ ಯೋಜನೆ ಮತ್ತು ಹಿಪ್ಪರಗಿ ಯೋಜನೆ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಬೆಳಗಾವಿ ಜಿಲ್ಲೆಯ ಹಿರಣ್ಯಕೇಶಿ ನದಿಗೆ ಅಲ್ಪ ಪ್ರಮಾಣದ ನೀರಿನ ಒಳ ಹರಿವು ಪ್ರಾರಂಭವಾಗಿದ್ದು, ದಿನಾಂಕ:07.07.2023 ರಂದು ಘಟಪ್ರಭಾ ನದಿಯ ಧೂಪದಾಳ ವೇಯರ್ ನೀರಿನ ಮಟ್ಟ 2008.5 ಅಡಿ ತಲುಪುವ ಸಾಧ್ಯತೆ ಇರುತ್ತದೆ. ಆದರೆ ಘಟಪ್ರಭಾ ನದಿಯ ಕೆಳಗಡೆ ಇರುವ 14 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ ಈಗಾಗಲೇ ಬೆಳಗಾವಿ ಜಿಲ್ಲೆಯ ಹುಲಕುಂದ, ಬಾಗಲಕೋಟೆ ಜಿಲ್ಲೆಯ ಸೈದಾಪೂರ, ಅರಕೆರೆ, ಚಿಂಚಲಕಟ್ಟಿ ಅನವಾಲ ಮತ್ತು ಕಟಗೇರಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡಿರುತ್ತವೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅವಲಂಬಿತ ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ತಪ್ಪಿಸಲು ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ಬರುವ ನೀರಿನ ಒಳ ಹರಿವಿನಿಂದ ಧೂಪದಾಳ ವೇಯರ್ ನೀರಿನ ಮಟ್ಟ 2008.5 ಅಡಿ ತಲುಪಿದ ನಂತರ ಹೆಚ್ಚುವರಿಯಾದ ನೀರನ್ನು ಘಟಪ್ರಭಾ ನದಿಗೆ ಹರಿಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದರು.
ನೀರಾವರಿ ಉದ್ದೇಶಕ್ಕಾಗಿ ನೀರಾವರಿ ಸಲಹಾ ಸಮಿತಿಯಿಂದ ಅಥವಾ ಸರ್ಕಾರದಿಂದ ಅನುಮತಿ ಪಡೆದು ಕ್ರಮಕೈಗೊಳ್ಳಬಹುದು ಎಂದು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ನಿರ್ದೇಶನ ನೀಡಿದರು.
ಬೆಳಗಾವಿ ವಿಭಾಗದ ಮಳೆಯ ಪ್ರಮಾಣ:
ಬೆಳಗಾವಿ: ವಾಡಿಕೆ (ಮಿ.ಮೀ) 175: ವಾಸ್ತವಿಕ (ಮಿ.ಮೀ) 71 ಮಿ.ಮೀ. ಹಾಗೂ ಕೊರತೆ (ಶೇಕಡಾ) -60 ರಷ್ಟಿರುತ್ತದೆ.
ಬಾಗಲಕೋಟೆ: ವಾಡಿಕೆ (ಮಿ.ಮೀ) 94: ವಾಸ್ತವಿಕ (ಮಿ.ಮೀ) 31 ಮಿ.ಮೀ. ಹಾಗೂ ಕೊರತೆ (ಶೇಕಡಾ) -67 ರಷ್ಟಿರುತ್ತದೆ.
ವಿಜಯಪುರ: ವಾಡಿಕೆ (ಮಿ.ಮೀ) 98: ವಾಸ್ತವಿಕ (ಮಿ.ಮೀ) 47 ಮಿ.ಮೀ. ಹಾಗೂ ಕೊರತೆ (ಶೇಕಡಾ) -52 ರಷ್ಟಿರುತ್ತದೆ.
ಗದಗ: ವಾಡಿಕೆ (ಮಿ.ಮೀ) 95: ವಾಸ್ತವಿಕ (ಮಿ.ಮೀ) 65 ಮಿ.ಮೀ. ಹಾಗೂ ಕೊರತೆ (ಶೇಕಡಾ) -32 ರಷ್ಟಿರುತ್ತದೆ.
ಹಾವೇರಿ: ವಾಡಿಕೆ (ಮಿ.ಮೀ) 146: ವಾಸ್ತವಿಕ (ಮಿ.ಮೀ) 75 ಮಿ.ಮೀ. ಹಾಗೂ ಕೊರತೆ (ಶೇಕಡಾ) -49 ರಷ್ಟಿರುತ್ತದೆ.
ಧಾರವಾಡ: ವಾಡಿಕೆ (ಮಿ.ಮೀ) 147: ವಾಸ್ತವಿಕ (ಮಿ.ಮೀ) 71 ಮಿ.ಮೀ. ಹಾಗೂ ಕೊರತೆ (ಶೇಕಡಾ) -51 ರಷ್ಟಿರುತ್ತದೆ.
ಉತ್ತರ ಕನ್ನಡ: ವಾಡಿಕೆ (ಮಿ.ಮೀ) 859: ವಾಸ್ತವಿಕ (ಮಿ.ಮೀ) 506 ಮಿ.ಮೀ. ಹಾಗೂ ಕೊರತೆ (ಶೇಕಡಾ) -41 ರಷ್ಟಿರುತ್ತದೆ.
ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಹಾಗೂ ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹ ಕುರಿತು ಪ್ರಾದೇಶಿಕ ಆಯುಕ್ತರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಸಭೆಯಲ್ಲಿ ಆಲಮಟ್ಟಿ ಜಲಾಶಯ, ಮಲಪ್ರಬಾ ಯೋಜನೆ, ಘಟಪ್ರಬಾ ಯೋಜನೆ ಹಾಗೂ ಹಿಪ್ಪರಗಿ ಯೋಜನೆಯ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಸಂಬಂಧಿಸಿದ ಸೂಪರಿಂಟೆಂಡಿಂಗ್ ಎಂಜಿಯರ್, ಸಣ್ಣ ನೀರಾವರಿ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧೀಕ್ಷಕ ಅಭಿಯಂತರರು ಮತ್ತು ಇತರೆ ಅಧಿಕಾರಿಗಳು ಹಾಜರಿದ್ದರು.