ಬೆಂಗಳೂರು :
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಸೇರಿದಂತೆ 13 ಜನರನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಆಡಳಿತ ಉಸ್ತುವಾರಿ ಸಿ.ಎಸ್.ಚಂದ್ರಭೂಪಾಲ್ ಉಚ್ಛಾಟನೆ ಮಾಡಿದ್ದಾರೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರು ಪಕ್ಷವನ್ನು ಬಿಟ್ಟು ಇನ್ನಿತರ ಪಕ್ಷಗಳಿಗೆ ಪಕ್ಷಾಂತರ ಮಾಡಿರುವುದು ಮತ್ತು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಶಿಫಾರಸ್ಸಿನಂತೆ ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.
ಡಾ. ರಾಜನಂದಿನಿ, ಜಿಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ನಗರಸಭೆ ಮಾಜಿ ಸದಸ್ಯ ಜಿ.ಕೆ.ಭೈರಪ್ಪ, ರಮೇಶ್ ಗಾಳಿಪುರ, ಗ್ರಾಪಂ ಅಧ್ಯಕ್ಷ ವೆಂಕಟೇಶ ಮೆಳವರಿಗೆ, ಭರ್ಮಪ್ಪ ಅಂದಾಸುರ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ್ ಲ್ಯಾವಿಗೆರೆ, ಶಿವಪ್ಪ, ಮೋಹನ್, ಅಬ್ದುಲ್ ಹಮೀದ್, ರಮೇಶ್ ಹೊಸಂತೆ, ಎಂ.ಎಚ್.ವೀರೇಂದ್ರ ಮಡಸೂರು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.