ಬೆಳಗಾವಿ: ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಆಗಿರುವ ಬಸವರಾಜ ಹೆಗ್ಗನಾಯಕ ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಆಡಳಿತ ವಿಭಾಗದ ಉಪಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.
ವಿಜಯನಗರ ಜಿಲ್ಲಾ ಪಂಚಾಯತ್ನ ಉಪಕಾರ್ಯದರ್ಶಿಯಾಗಿ ವರ್ಗಾವಣೆಗೊಂಡ ಭೀಮಪ್ಪ ಲಾಳಿ ಅವರ ಜಾಗಕ್ಕೆ ಬಸವರಾಜ ಹೆಗ್ಗನಾಯಕ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲಾ ಪಂಚಾಯತ್ನಲ್ಲಿ ಅಭಿವೃದ್ಧಿ ವಿಭಾಗದಲ್ಲಿ ಉಪಕಾರ್ಯದರ್ಶಿಯಾಗಿ ಬಸವರಾಜ ಹೆಗ್ಗನಾಯಕ ಕಾರ್ಯನಿರ್ವಹಿಸುತ್ತಿದ್ದರು.
ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಖ್ಯಾತಿ ಗಳಿಸಿರುವ ಹೆಗ್ಗನಾಯಕ ಆಡಳಿತ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಬಸವರಾಜ ಹೆಗ್ಗನಾಯಕ ಅವರು ಮೂಲತಃ ಹುಕ್ಕೇರಿ ತಾಲೂಕಿನ ಚಿಕ್ಕಲದಿನ್ನಿ ಗ್ರಾಮದವರು. ಬಡತನದಲ್ಲಿ ಅರಳಿದ ಪ್ರತಿಮೆ ಆಗಿರುವ ಹೆಗ್ಗನಾಯಕ ಕೆಎಎಎಸ್ ಪಾಸ್ ಮಾಡಿಕೊಂಡು ಉನ್ನತ ಹುದ್ದೆಗೇರಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಪಂಚಾಯತ್, ಗೋಕಾಕ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೆಗ್ಗನಾಯಕ ಅವರಿಗಿದೆ. ಎರಡೂವರೆ ವರ್ಷಗಳ ಕಾಲ ಬೆಳಗಾವಿಯಲ್ಲಿ ಅಭಿವೃದ್ಧಿ ವಿಭಾಗದ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಧಾರವಾಡ ಜಿಪಂ ಉಪಕಾರ್ಯದರ್ಶಿ ಹಾಗೂ ಧಾರವಾಡ ಜಿಪಂ ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ್ದಾರೆ. ಆಡಳಿತದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ.