ಅಶೋಕ ಪಟ್ಟಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಸಿದ್ದರಾಮಯ್ಯ ಅವರ ಬಲಗೈ ಬಂಟ ಎಂದೇ ಪ್ರಖ್ಯಾತಿ ಪಡೆದಿದ್ದು ರಾಮದುರ್ಗ ವಿಧಾನಸಭಾ ಮತಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಚಿವ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಕೊನೆಗೂ ಪ್ರತಿಷ್ಠಿತ ಹುದ್ದೆ ಲಭಿಸಿದೆ.
ಬೆಂಗಳೂರು : ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕರನ್ನಾಗಿ ರಾಮದುರ್ಗ ಕಾಂಗ್ರೆಸ್ ಶಾಸಕ ಅಶೋಕ ಪಟ್ಟಣ (72) ನೇಮಕಗೊಂಡಿದ್ದಾರೆ.
ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ಸಲೀಂ ಅಹಮದ್ ಅವರನ್ನು ನೇಮಕ ಮಾಡಲಾಗಿದೆ.ಹಿರಿಯ ಶಾಸಕ, ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಅಶೋಕ ಪಟ್ಟಣ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು ಚೀಫ್ ವಿಪ್ ಆಯ್ಕೆಯಲ್ಲಿ ಸಿದ್ದರಾಮಯ್ಯ ಕೈ ಮೇಲಾಗಿದೆ. ಸಲೀಂ ಅವರು ಕಾಂಗ್ರೆಸ್ ನ ನಿಷ್ಠಾವಂತ ನಾಯಕರಾಗಿದ್ದು ಮೇಲ್ಮನೆಯಲ್ಲಿ ಪಕ್ಷದ ಶಾಸಕರ ಚಟುವಟಿಕೆಗಳ ಮೇಲೆ ನಿಗಾ ಇಡಲಿದ್ದಾರೆ.
ಇಂದು ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದ್ದು ಅಧಿವೇಶನಕ್ಕೆ ಮುನ್ನ ಕಾಂಗ್ರೆಸ್ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮುಖ್ಯ ಸಚೇತಕರ ಆಯ್ಕೆಯನ್ನು ಘೋಷಿಸಿದೆ.