ದೆಹಲಿ :
ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಅಜಿತ್ ಅಗರ್ಕರ್ ನೇಮಕವಾಗುವುದು ಬಹುತೇಕ ಖಚಿತವೆನಿಸಿದೆ. ಬಹುತೇಕ ವರದಿಗಳ ಪ್ರಕಾರ ಟೀಂ ಇಂಡಿಯಾ ಆಲ್ರೌಂಡರ್ ಅಜಿತ್ ಅಗರ್ಕರ್, ಚೇತನ್ ಶರ್ಮಾ ಅವರ ಸ್ಥಾನವನ್ನು ತುಂಬಲಿದ್ದಾರೆ. ಈ ವರ್ಷಾರಂಭದಲ್ಲಿ ಚೇತನ್ ಶರ್ಮಾ, ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಗರ್ಕರ್ ಗುರುವಾರ ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದು, ಜು.1-2ರಂದು ನಡೆಯಲಿರುವ ಕ್ರಿಕೆಟ್ ಸಲಹಾ ಸಮಿತಿಯ ಸಂದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾಗಲು ಅಗರ್ಕರ್ ಅರ್ಹರಾಗಿದ್ದಾರೆ. ಅಜಿತ್ ಅಗರ್ಕರ್ 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಅನುಭವಿ ಕ್ರಿಕೆಟಿಗ ಅಜಿತ್ ಅಗರ್ಕರ್ ಭಾರತ ಪರ 288 ವಿಕೆಟ್ ಕಬಳಿಸುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಭಾರತ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಅಜಿತ್ ಅಗರ್ಕರ್ ಕ್ರಿಕೆಟ್ ವಿಶ್ಲೇಷಕರಾಗಿ ಗಮನ ಸೆಳೆದಿದ್ದಾರೆ
ಇನ್ನು 2017ರಲ್ಲಿ ಅಜಿತ್ ಅಗರ್ಕರ್, ಮಾಜಿ ನಾಯಕ ಧೋನಿ ಕುರಿತಾಗಿ ನೀಡಿದ ಹೇಳಿಕೆಯೊಂದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲವನ್ನೇ ಮೂಡಿಸಿತ್ತು. ಧೋನಿಯನ್ನು ಭಾರತ ಟಿ20 ತಂಡದಿಂದ ಕೈಬಿಡಬೇಕೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅಗರ್ಕರ್, “ಭಾರತ ತಂಡವು ಇನ್ನು ಮುಂದೆ ಧೋನಿಯನ್ನು ಹೊರತುಪಡಿಸಿ ಉಳಿದ ಆಯ್ಕೆಗಳ ಕುರಿತಂತೆ ಗಮನ ಹರಿಸಬೇಕು. ಕನಿಷ್ಠ ಪಕ್ಷ ಟಿ20 ಕ್ರಿಕೆಟ್ ಮಾದರಿಯಲ್ಲಾದರೂ ಈ ಆಲೋಚನೆ ಮಾಡಬೇಕು. ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದ್ದಾರೆ. ಒಂದು ವೇಳೆ ಅವರು ತಂಡದ ನಾಯಕರಾಗಿದ್ದರೇ ಅದರ ಲೆಕ್ಕಾಚಾರ ಬೇರೆಯದ್ದೇ ಆಗಿರುತ್ತಿತ್ತು. ಆದರೆ ಕೇವಲ ಅವರನ್ನು ಬ್ಯಾಟರ್ ಆಗಿ ನೋಡುವುದಾದರೇ, ಖಂಡಿತವಾಗಿಯೂ ಭಾರತ ತಂಡ ಮಿಸ್ ಮಾಡಿಕೊಳ್ಳಲಿದೆ ಎಂದೆನಿಸುತ್ತಿಲ್ಲ. ಈಗ ಧೋನಿಯನ್ನು ಹೊರತುಪಡಿಸಿ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದಾರೆ” ಎಂದು ಹೇಳಿದ್ದರು.
ಅಜಿತ್ ಅಗರ್ಕರ್ ಅವರ ಈ ಹೇಳಿಕೆ ನೀಡಿ ವರ್ಷ ತುಂಬುವಷ್ಟರಲ್ಲಿ ಧೋನಿಯನ್ನು ಟಿ20 ತಂಡದಿಂದ ಹೊರಗಿಟ್ಟು ರಿಷಭ್ ಪಂತ್ಗೆ ಹೆಚ್ಚಿನ ಅವಕಾಶ ನೀಡಲಾರಂಭವಾಯಿತು. ಇದರ ಬೆನ್ನಲ್ಲೇ ಆಯ್ಕೆ ಸಮಿತಿಯ ತೀರ್ಮಾನವನ್ನು ಅಜಿತ್ ಅಗರ್ಕರ್ ಸಮರ್ಥಿಸಿಕೊಂಡಿದ್ದರು.
ಇದರ ಹೊರತಾಗಿಯೂ ಎಂ ಎಸ್ ಧೋನಿ 2019ರಲ್ಲಿ ಭಾರತ ಪರ ಟಿ20 ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿದ್ದರು. ಬಳಿಕ ನ್ಯೂಜಿಲೆಂಡ್ ಹಾಗೂ ಅಸ್ಟ್ರೇಲಿಯಾ ಎದುರಿನ ಟಿ20 ಸರಣಿಯಲ್ಲೂ ಧೋನಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದಾದ ನಂತರ 2019ರ ಏಕದಿನ ವಿಶ್ವಕಪ್ನಲ್ಲಿ ಧೋನಿ ಭಾರತ ಪರ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಇನ್ನು ಧೋನಿ 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಸದ್ಯ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರೂ ಸಹಾ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 16ನೇ ಆವತ್ತಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದಾಖಲೆಯ 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.