ಬೆಳಗಾವಿ :
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14,462 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು ಮುಂದಿನ ದಿನಗಳಲ್ಲಿ ಅವರ ಬೇಡಿಕೆಗಳನ್ನ ಹಂತ ಹಂತವಾಗಿ ಈಡೇರಿಸಲಾಗುವುದೆಂದು ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ ಭರವಸೆ ನೀಡಿದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಅಭಿವೃದ್ಧಿಪಡಿಸುವುದು. ವಿಶ್ವವಿದ್ಯಾಲಯ ಅಧೀನ ಮಹಾವಿದ್ಯಾಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು. ಹೊಸ ಶಿಕ್ಷಣ ನೀತಿಯನ್ನ ಹಲವು ಮಾರ್ಪಾಡುಗಳೊಂದಿಗೆ ಬದಲಾಯಿಸುವ ಯೋಚನೆ ಇದೆ ಎಂದು ತಿಳಿಸಿದರು.
ಅದಕ್ಕೆ ಸಂಬಂಧಪಟ್ಟಂತೆ ಶಿಕ್ಷಣ ತಜ್ಞರು, ಸಾರ್ವಜನಿಕರು, ಸಾಮಾಜಿಕ ಚಿಂತರುಕರು ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದ್ದು ಅವರ ಅಭಿಪ್ರಾಯಗಳನ್ನು ಆದರಿಸಿ ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು ಎಂದರು.
ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳೊಂದಿಗೆ ಪ್ರಣಾಳಿಕೆಯಲ್ಲಿರುವ ಎಲ್ಲಾ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಹನುಮಂತ ಗೌಡ ಕಲ್ಮನಿ ಅವರು ಉನ್ನತ ಶಿಕ್ಷಣ ಸಚಿವರಿಗೆ, ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕರಿಗೆ ಸನ್ಮಾನ ಮಾಡಿದರು.
ಅತಿಥಿ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಫೀಟರ್, ಈರಣ್ಣ ಹಳ್ಳಿಕೇರಿ, ಬೆಳಗಾವಿ ಜಿಲ್ಲಾ ಪ್ರಮುಖರಾದ ಡಾ. ಅಡಿವೆಪ್ಪ ಇಟಗಿ, ಗಜಾನನ ಸಂಗೋಟಿ, ನೀಲಕಂಠ ಭೂಮಣ್ಣವರ, ಇರ್ಫಾನ್ ಸಿಲ್ಲೆದಾರ್ ಉಪಸ್ಥಿತರಿದ್ದರು.