ಬೆಳಗಾವಿ :
ರಾಜ್ಯದ ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯಗಳಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್ ರದ್ದುಗೊಳಿಸಿರುವ ನಿರ್ಧಾರವನ್ನು ವಾಪಸ್ ಪಡೆಯುವಂತೆ ಬೆಳಗಾವಿಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ರಾಜ್ಯದಾದ್ಯಂತ ಕೃಷಿ ವಿಶ್ವವಿದ್ಯಾಲಯಗಳಲ್ಲಿರುವ ಕೃಷಿ ಡಿಪ್ಲೋಮಾ ಕೋರ್ಸುಗಳನ್ನು ರದ್ದುಗೊಳಿಸಿರುವ ರಾಜ್ಯ ಸರಕಾರದ ಕ್ರಮ ರೈತ ವಿರೋಧಿಯಾಗಿದ್ದು ಬಡ ವರ್ಗದ ರೈತಾಪಿ ಜನರು ಕಡಿಮೆ ವೆಚ್ಚದಲ್ಲಿ ಕೃಷಿ ತರಬೇತಿಯನ್ನು ಪಡೆಯುವಲ್ಲಿ ವಂಚಿತರಾಗಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಧಾರವಾಡ ಮತ್ತು ಬೆಂಗಳೂರಿನಲ್ಲಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳು ಕೃಷಿ, ಅರಣ್ಯೀಕರಣ ಮತ್ತು ರೇಷ್ಮೆ ಸಾಕಾಣಿಕೆಗಳಲ್ಲಿ ಎರಡು ವರ್ಷಗಳ ಕನ್ನಡ ಮಾಧ್ಯಮ ಡಿಪ್ಲೋಮಾ ಕೋರ್ಸ್ ಗಳಿಗಾಗಿ ನೋಟಿಪಿಕೇಶನ್ಗಳನ್ನು ಹೊರಡಿಸಿದ್ದವು. ಆದರೆ ದಿಢೀರ್ ಅವಗಳನ್ನು ವಾಪಸ್ ಪಡೆದಿವೆ. ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ರಾಜ್ಯ ಸರಕಾರದ ಸೂಚನೆ ಮೇರೆಗೆ ವಿಶ್ವವಿದ್ಯಾಲಯಗಳು ಈ ಕೋರ್ಸುಗಳನ್ನು ವಾಪಸ್ ಪಡೆದಿವೆ ಎನ್ನಲಾಗಿದೆ. ಅಲ್ಲದೇ ಸರಕಾರವು ಸಾಕಷ್ಟು ಹಣಕಾಸು ಬೆಂಬಲ ನೀಡದೇ ಇರುವದು ಸಹ ಕಾರಣ ಎನ್ನಲಾಗುತ್ತಿದೆ.
ಕೇವಲ ಐದು ಸಾವಿರ ರೂ.ಗಳ ಶುಲ್ಕದಲ್ಲಿ ರಾಜ್ಯದ ಬಡ ರೈತರು ಈ ಕೋರ್ಸುಗಳನ್ನು ಪಡೆಯಬಹುದಾಗಿತ್ತು. ಅಲ್ಲದೇ ಇಂತಹ ಡಿಪ್ಲೋಮಾ ಕೋರ್ಸುಗಳನ್ನು ಪಾಸು ಮಾಡಿದ ಯುವಕರಿಗೆ ರಾಜ್ಯ ಸರಕಾರದಲ್ಲಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸಾಕಷ್ಟು ಉದ್ಯೋಗವಕಾಶಗಳು ಸಹ ಲಭ್ಯವಿದೆ. ಆದ್ದರಿಂದ ರಾಜ್ಯ ಸರಕಾರ ಈ ಕೂಡಲೇ ಕೃಷಿ ವಿಶ್ವವಿದ್ಯಾಲಯಗಳಿಗೆ ಸೂಕ್ತ ಆದೇಶ ನೀಡುವ ಮೂಲಕ ಕೃಷಿ ವಿಜ್ಞಾನ ಡಿಪ್ಲೋಮಾ ಕೋರ್ಸುಗಳನ್ನು ಪುನರಾರಂಭಿಸಲು ಕ್ರಮ ಕೈಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.