ಬೆಂಗಳೂರು:
ಅನ್ನಭಾಗ್ಯ ಯೋಜನೆಯಡಿ ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆ ಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಈಗ ಹೆಚ್ಚುವರಿ ಅಕ್ಕಿ ಹೊಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ನೀಡಲು ನಿರ್ಧರಿಸಿದೆ.
ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯನ್ನು ಬಿಪಿಎಲ್ ಕುಟುಂಬಗಳಿಗೆ ಈಗಾಗಲೇ ಉಚಿತವಾಗಿ ನೀಡಲಾಗುತ್ತಿದ್ದು, ಉಳಿದ ಹೆಚ್ಚುವರಿ 5 ಕೆಜಿ ಅಕ್ಕಿಗೆ 170 ರೂ. ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಆಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಅಕ್ಕಿ ಸಿಗುವವರೆಗೆ ಮಾತ್ರ ಪರ್ಯಾಯ ವ್ಯವಸ್ಥೆ ರೂಪದಲ್ಲಿ ಹಣ ನೀಡಲಾಗುತ್ತಿದೆ. ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನೇ ನೀಡಲಾಗುವುದು ಎಂದು ಮುನಿಯಪ್ಪ ತಿಳಿಸಿದ್ದಾರೆ.
ಜುಲೈ 1 ರಿಂದಲೇ ಇದು ಜಾರಿಗೆ ಬರುತ್ತದೆ. ಐದು ಕೆಜಿ ಅಕ್ಕಿ ನೀಡಲು ಅಕ್ಕಿ ದಾಸ್ತಾನು ದೊರಕುವುದು ಕಷ್ಟವಾಗಿದೆ. ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕ ಮಾಡಿದ್ದೇವೆ. ಕೆಲವರು ಸ್ಪಂದಿಸಿದ್ದಾರೆ. ಅಕ್ಕಿ ಲಭ್ಯವಾದ ತಕ್ಷಣ ಅದನ್ನು ನೀಡಲಾಗುವುದು ಎಂದು ತಿಳಿಸಿದರು.
ನಾನು ಕೇಂದ್ರ ಸರ್ಕಾರಕ್ಕೆ ಹಣ ಕೊಡುತ್ತೇವೆ ಎಂದು ಮನವಿ ಮಾಡಿದರೂ ಹೆಚ್ಚುವರಿ ಅಕ್ಕಿ ಕೊಡಲು ನಿರಾಕರಿಸಿದರು ಎಂದು ಮುನಿಯಪ್ಪ ಹೇಳಿದರು. ಓಪನ್ ಟೆಂಡರ್ನಲ್ಲಿ ಕೆಜಿಗೆ 31 ರೂಪಾಯಿಯಂತೆ ಬೇರೆಯವರಿಗೆ ಅಕ್ಕಿಯನ್ನು ನೀಡಿದ್ದಾರೆ. ಆದರೆ, ನಾವು ಕೆಜಿಗೆ 34 ರೂಪಾಯಿ ಕೊಡುತ್ತೇವೆ ಎಂದು ತಿಳಿಸಿದರೂ ಕೊಡಲಿಲ್ಲ. ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಟುಂಬದಲ್ಲಿ ಓರ್ವ ಸದಸ್ಯ ಇದ್ದರೆ 170 ರೂ., ಇಬ್ಬರು ಇದ್ದರೆ 340 ರೂ. ಮೂವರು ಇದ್ದರೆ 510 ರೂ., ನಾಲ್ವರು ಇದ್ದರೆ 680 ರೂ., ಐವರು ಸದಸ್ಯರ ಕುಟುಂಬಕ್ಕೆ 850 ರೂ. ತಿಂಗಳಿಗೆ ಸಿಗಲಿದೆ. ಇದು ತಾತ್ಕಾಲಿಕ ಮಾತ್ರ, ಅಕ್ಕಿ ಸಿಕ್ಕ ಬಳಿಕ ಅಕ್ಕಿಯನ್ನೇ ವಿತರಣೆ ಮಾಡಲಾಗುತ್ತದೆ. ಪ್ರತಿ ಬಿಪಿಎಲ್ ಕಾರ್ಡ್ಗಳಲ್ಲಿ ಕುಟುಂಬದ ಯಜಮಾನ ಯಾರು ಎಂದು ನಮೂದಾಗಿರುತ್ತದೆ. ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.