ಬೆಂಗಳೂರು :
ಬುಧವಾರ ರಾಜ್ಯ ಸರ್ಕಾರದ ಮೂರನೇ ಸಚಿವ ಸಂಪುಟ ಸಭೆ ನಡೆಯಲಿದ್ದು ಈ ಸಭೆಯಲ್ಲಿ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆ ಜಾರಿ ವಿಚಾರ ಚರ್ಚೆಗೆ ಬರಲಿದೆ. ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸುವ ಸಾಧ್ಯತೆಯೂ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಈಗಾಗಲೇ ಅಧಿಕೃತವಾಗಿ ಜಾರಿಗೊಳಿಸಿರುವ ಗೃಹ ಜ್ಯೋತಿ, ಶಕ್ತಿ ಹೊರತುಪಡಿಸಿ ಬಾಕಿ ಇರುವ ಗೃಹ ಲಕ್ಷ್ಮಿ, ಅನ್ನ ಭಾಗ್ಯದ 10 ಕೆ.ಜಿ.ಅಕ್ಕಿ ಯೋಜನೆಗಳ ಜಾರಿ ಯಾವಾಗಿನಿಂದ ಮಾಡಲು ಸಾಧ್ಯ ಎನ್ನುವ ವಿಚಾರಗಳು ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆ ಇದೆ. ಯುವನಿಧಿ ಯೋಜನೆಗೆ ಜಾರಿಗೆ ಇನ್ನೂ ಕಾಲಾವಕಾಶ ಇರುವುದರಿಂದ ಸದ್ಯ ಆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಈ ಪೈಕಿ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೆ ಇಲಾಖಾ ಮಟ್ಟದಲ್ಲಿ ಅರ್ಜಿ ನಮೂನೆಯನ್ನು ಅಂತಿಮಗೊಳಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೇ ಹೆಬ್ಬಾಳ್ಕರ್ ಅವರು ಹೇಳಿರುವಂತೆ ಇದಕ್ಕೆ ಮುಖ್ಯಮಂತ್ರಿ ಅವರ ಒಪ್ಪಿಗೆಯಷ್ಟೆಬಾಕಿ ಇದೆ. ಜೊತೆಗೆ ಯೋಜನೆಯನ್ನು ಯಾವಾಗಿನಿಂದ ಜಾರಿಗೊಳಿಸಬೇಕು ಮತ್ತು ಅರ್ಜಿ ಸಲ್ಲಿಕೆಗೆ ದಿನಾಂಕ ನಿಗದಿಪಡಿಸುವುದು ಬಾಕಿ ಇದೆ. ಇದೆಲ್ಲದಕ್ಕೂ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಂಡು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.