ಜನ ಜೀವಾಳ ಸರ್ಚ್ ಲೈಟ್ ಬೆಳಗಾವಿ :ತನ್ನ ಹುಟ್ಟುಹಬ್ಬಕ್ಕೆ ಈ ಯುವತಿ ಮಾಡಿದ್ದೇನು ಗೊತ್ತೇ…?ಬೆಳಗಾವಿಯ ಯುವತಿ ತನ್ನ ಹುಟ್ಟು ಹಬ್ಬಕ್ಕೆ ಮಾಡಿದ ಸಣ್ಣ ಕಾರ್ಯವೊಂದು ಇದೀಗ ಸಾರ್ವಜನಿಕರ ಮನ ಗೆಲ್ಲುವಂತಾಗಿದೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ವೈರಲ್ ಗೆ ಕಾರಣವಾಗಿದೆ.
ಬೆಳಗಾವಿಗೆ ಹೊಂದಿಕೊಂಡಿರುವ ಕಣಬರಗಿಯ ಯುವತಿ ಕೀರ್ತಿ ಧಾಮಣೆಕರ ತನ್ನ ಹುಟ್ಟುಹಬ್ಬವನ್ನು ಈ ವರ್ಷ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟು ಹಬ್ಬದ ಸಲುವಾಗಿ ಎರಡು ದಿನಗಳ ಕಾಲ ಕಣಬರಗಿಯ ವಿಶಾಲ ಕೆರೆಯಲ್ಲಿ ಕಣ್ಣು ಕುಕ್ಕುವ ರೀತಿಯಲ್ಲಿ ಸಾರ್ವಜನಿಕರು ಎಸೆದಿದ್ದ ಪ್ಲಾಸ್ಟಿಕ್ಗಳು, ಹೂವಿನ ಹಾರಗಳು ಸೇರಿದಂತೆ ಇತರ ವಸ್ತುಗಳನ್ನು ಕೆರೆಯಿಂದ ಎತ್ತಿ ಚೀಲಕ್ಕೆ ತುಂಬಿಸಿ ಅಲ್ಲಿಂದ ಹೊರ ಹಾಕುವ ಮೂಲಕ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.
ಈ ಮೂಲಕ ಕೆರೆಯ ನೀರು ಮಲಿನವಾಗುವುದನ್ನು ತಪ್ಪಿಸಲು ತನ್ನ ಅಳಿಲು ಸೇವೆಯನ್ನು ಮಾಡಿದ್ದಾರೆ. ಇಂದು ತಮ್ಮ ಹುಟ್ಟು ಹಬ್ಬವನ್ನು ಆಡಂಬರವಾಗಿ ಆಚರಿಸಿಕೊಂಡು ಸಾಕಷ್ಟು ದುಂದು ವೆಚ್ಚ ಮಾಡಿಕೊಳ್ಳುತ್ತಾರೆ. ಅದರಲ್ಲೂ ವಾಟ್ಸಾಪ್ ಸ್ಟೇಟಸ್ ಮೂಲಕ ಹುಟ್ಟುಹಬ್ಬವನ್ನು ಆಚರಿಸುವವರೆ ಜಾಸ್ತಿ. ಅಂತಹ ಜನರಿಗೆ ಈ ಸಾಮಾಜಿಕ ಕಳಕಳಿ ಹೊಂದಿರುವ ಈ ಯುವತಿ ಮಾದರಿಯಾಗಿ ನಿಂತಿದ್ದಾರೆ.
ಜೊತೆಗೆ ಕಣಬರಗಿ ಕೆರೆಗೆ ಹಾರ, ಪ್ಲಾಸ್ಟಿಕ್ ಸೇರಿದಂತೆ ಇತರ ಕಸಗಳನ್ನು ಎಸೆಯುವ ಜನರಿಗೆ ಇನ್ನು ಮುಂದೆ ಕಸ ಎಸೆಯದಂತೆ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ. ಎರಡು ದಿನಗಳ ಕಾಲ ಯುವತಿ ಕೆರೆಯಲ್ಲಿ ಇಳಿದು ಕಸವನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಮಾತ್ರವಲ್ಲ ಇಂತಹ ಜನರಿದ್ದರೆ ಸಮಾಜ ಸುಧಾರಣೆ ಸ್ವಲ್ಪ ಮಟ್ಟಿಗಾದರೂ ಸಾಧ್ಯವಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಒಟ್ಟಾರೆ, ಸಾಮಾಜಿಕ ಕಳಕಳಿ ಹೊಂದಿರುವ ಈ ಯುವತಿಯ ಕಾರ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಯುವತಿ ತನ್ನ ಹುಟ್ಟು ಹಬ್ಬವನ್ನು ವಿಶೇಷ ಹಾಗೂ ವಿಭಿನ್ನವಾಗಿ ಆಚರಿಸಿಕೊಳ್ಳುತ್ತಿರುವ ಚಿಂತನೆಗೆ ಜನ ಮನಸೋತಿದ್ದು ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಹಾರೈಕೆ ಮಾಡುತ್ತಿದ್ದಾರೆ.