ಬೆಳಗಾವಿ :
ಯೋಗವು ನಮ್ಮ ಭಾರತೀಯ ಪರಂಪರೆಯ ಜೀವನ ವಿಧಾನವೆನಿಸಿದೆ. ನಮ್ಮ ಬದುಕಿನ ಆರೋಗ್ಯ ಮಂತ್ರ ಇರುವುದು ಯೋಗದಲ್ಲಿ. ನಮ್ಮ ಬೌದ್ಧಿಕ ಹಾಗೂ ಶಾರೀರ ಬೆಳವಣಿಗೆಯಲ್ಲಿ ಯೋಗವನ್ನು ಯುವಜನಾಂಗವು ಅಳವಡಿಸಿಕೊಂಡು ಬದುಕಿನ ಸುಂದರಗೊಳಿಸಿಕೊಳ್ಳಬೇಕೆಂದು ಬೆಳಗಾವಿ ಕೆಎಲ್ಇ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ದೈಹಿಕ ನಿರ್ದೇಶಕಿ ಡಾ.ರೀಚಾ ರಾವ್ ಹೇಳಿದರು.
ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಎನ್ಸಿಸಿ ಎನ್ಎಸ್ಎಸ್ ಹಾಗೂ ಕ್ರೀಡಾ ವಿಭಾಗದ ವಿದ್ಯಾರ್ಥಿಗಳಿಗೆ ಯೋಗ ಕುರಿತು ಪ್ರಾಯೋಗಿಕವಾಗಿ ತಿಳಿಸುತ್ತಾ ಮಾತನಾಡಿದರು.
ಇಂದಿನ ಒತ್ತಡ ಜೀವನಕ್ರಮದಲ್ಲಿ ಯೋಗವನ್ನು ಔಷಧವನ್ನಾಗಿ ಸ್ವೀಕರಿಸಬೇಕಾಗಿದೆ. ದಿನದ ಇಪ್ಪತ್ತನಾಲ್ಕು ಗಂಟೆ ಈ ದೇಹವು ನಮಗಾಗಿ ದುಡಿಯುತ್ತಿದೆ. ಇಂತಹ ಭವ್ಯವಾದ ದೇಹವನ್ನು ಮನಸ್ಸನ್ನು ಯೋಗದ ಮೂಲಕವಾಗಿ ಮತ್ತಷ್ಟು ನಿರ್ಮಲಗೊಳಿಸುವ ಕಾರ್ಯ ನಡೆಯಬೇಕು. ಇಂದು ಭಾರತ ಯೋಗದ ಗುರುವಾಗಿ ಕಾರ್ಯನಿರ್ವಹಿಸುತ್ತಿದೆ. ಯೋಗಕ್ಕೆ ವಿಶ್ವಸಂಸ್ಥೆಯು ವಿಶ್ವಮಾನ್ಯತೆಯನ್ನು ನೀಡಿರುವುದು ಹೆಮ್ಮೆಯೆನಿಸುತ್ತಿದೆ. ವಿದ್ಯಾರ್ಥಿಗಳಾದವರು ನಿತ್ಯ ಯೋಗದಲ್ಲಿ ತೊಡಗುವುದರ ಮೂಲಕ ಸಮಾಜ ಹಾಗೂ ರಾಷ್ಟçದ ಆರೋಗ್ಯವನ್ನು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ. ಯೋಗವು ನಮ್ಮ ಜೀವನದ ವಿಧಾನವಾಗಲಿ ಎಂದು ಕಿವಿಮಾತು ಹೇಳಿದರು.
ಪದವಿ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಪದವಿಪೂರ್ವ ಪ್ರಾಚಾರ್ಯ ಗಿರಿಜಾ ಹಿರೇಮಠ, ದೈಹಿಕ ನಿರ್ದೇಶಕ ಡಾ.ಸಿ.ರಾಮರಾವ್ ಉಪಸ್ಥಿತರಿದ್ದರು. ಕ್ಯಾಪ್ಟನ್ ಡಾ.ಮಹೇಶ ಗುರನಗೌಡರ ಸ್ವಾಗತಿಸಿದರು. ಡಾ.ಎಚ್.ಎಂ.ಚನ್ನಪ್ಪಗೋಳ ವಂದಿಸಿದರು.