ಬಾಳೆಹೊನ್ನೂರು:
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಕೇಂದ್ರದ ಕಾಯ್ದೆ ಮೂಲಕ ನಡೆಯುತ್ತಿದ್ದು, ಒಂದು ಬಾರಿ ವಿದ್ಯುತ್ ದರ ಅನುಮೋದನೆ ಆದ ಬಳಿಕ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಅವರು ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
2022ರ ನವೆಂಬರ್ನಿಂದ ದರ ಪ್ರಕ್ರಿಯೆ ಆರಂಭವಾಗಿದೆ. ಮಾರ್ಚ್ನಲ್ಲೇ ದರ ಏರಿಕೆ ಆಗಬೇಕಿತ್ತು. ಆಗ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಏರಿಕೆ ಆಗಿರಲಿಲ್ಲ. ಮೇ 12ರಿಂದ ಅನ್ವಯವಾಗುವಂತೆ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್ ಪಾತ್ರವಿಲ್ಲ. ಬಿಜೆಪಿ ಅವಧಿಯಲ್ಲೇ ದರ ಏರಿಕೆ ಆಗಿದೆ ಎಂದರು.
ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರನ್ನು ರಂಭಾಪುರಿ ಸ್ವಾಮೀಜಿ ಸನ್ಮಾನಿಸಿದರು
ಜುಲೈನಿಂದ ಯಾವುದೇ ಬೆಲೆ ಏರಿಕೆ ಆದರೂ ಅದನ್ನು ಸರ್ಕಾರ ಭರಿಸಲಿದೆ. ಆದರೆ, ಹಿಂದಿನ ಬಾಕಿಯನ್ನು ಗ್ರಾಹಕರೇ ಭರಿಸಬೇಕು ಎಂದ ಅವರು, ಅಡಿಕೆ ಹಾನಿ ಬಗ್ಗೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಜತೆ ಹಾಗೂ ಶಾಸಕರೊಂದಿಗೆ ಚರ್ಚಿಸಲಾಗುವುದು. ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅನುದಾನ ತಂದು ಸರಿಪಡಿಸಲಾಗುವುದು ಎಂದರು.