ಜೈಪುರ :
ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿ ಹಲವು ದಿನಗಳಿಂದ ಹರಿದಾಡಿತ್ತು. ಆದರೆ ಸದ್ಯಕ್ಕೆ ಈ ವದಂತಿ ಸುಳ್ಳಾಗಿದೆ. ರಾಜಸ್ಥಾನದ ದೌಸಾದಲ್ಲಿ ಭಾನುವಾರ ಆಯೋಜಿಸಲಾಗಿದ್ದ ತಮ್ಮ ತಂದೆ ದಿ. ರಾಜೇಶ್ ಪೈಲಟ್ ಅವರ ಪುಣ್ಯತಿಥಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಹೊಸ ಪಕ್ಷ ಘೋಷಣೆ ಮಾಡುತ್ತಾರೆ ಎಂಬ ವದಂತಿ ಹರಿದಾಡಿತ್ತು. ಆದರೆ ಅವರು ಈ ಸಂದರ್ಭದಲ್ಲಿ ಹೊಸ ಪಕ್ಷದ ಘೋಷಣೆ ಮಾಡಿಲ್ಲ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರ ಜೊತೆ ಸಚಿನ್ ಪೈಲಟ್ ಬಹುಕಾಲದಿಂದ ವೈರುಧ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ರಾಜಕೀಯ ಪಕ್ಷ ಘೋಷಣೆ ಮಾಡುತ್ತಾರೆ ಎಂಬ ಸುದ್ದಿ ಸಂಚಲನಕ್ಕೆ ಕಾರಣವಾಗಿತ್ತು.
ದೇವರು ಒಂದಲ್ಲ ಒಂದು ದಿನ ನನಗೆ ನ್ಯಾಯ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ. ಯುವಕರ ಉತ್ತಮ ಭವಿಷ್ಯಕ್ಕೆ ನಾನು ಹೋರಾಡುತ್ತೇನೆ. ನಾನು ದುರ್ಬಲ ಅಲ್ಲ, ಹಿಂಜರಿಯುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ರಾಜಕೀಯದಲ್ಲೂ ತಮ್ಮ ತಂದೆ ರಾಜೇಶ್ ಪೈಲಟ್ ಹಲವು ರೀತಿ ಏರಿಳಿತ ಕಂಡಿದ್ದರು. ಆದರೆ ತತ್ವದರ್ಶಗಳಲ್ಲಿ ರಾಜಿ ಮಾಡಿಕೊಂಡವರಲ್ಲ ಎಂದು ಸಚಿನ್ ಪೈಲಟ್ ಹೇಳಿದ್ದಾರೆ. ಸಚಿನ್ ಪೈಲಟ್ ಅವರು ಹೊಸ ಪಕ್ಷದ ಘೋಷಣೆ ಮಾಡದೇ ಇರುವುದರಿಂದ ರಾಜಸ್ಥಾನ ಕಾಂಗ್ರೆಸ್ ಘಟಕ ಸದ್ಯಕ್ಕೆ ಮುಜುಗರದಿಂದ ಪಾರಾಗಿದೆ. ಈ ವರ್ಷದಲ್ಲಿ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರ ಹಿಡಿಯುವ ಕನಸು ಕಂಡಿದೆ.
ಒಟ್ಟಾರೆ ಸಚಿನ್ ಪೈಲಟ್ ಪಕ್ಷದಿಂದ ದೂರ ಸರಿಯದೆ ಇರುವುದು ಸದ್ಯಕ್ಕೆ ಕಾಂಗ್ರೆಸ್ ಪಾಲಿಗೆ ಉತ್ತಮ ಬೆಳವಣಿಗೆಯಾಗಿದೆ.