ದೆಹಲಿ :
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಎಸ್ಟಿ ಸುಧಾರಣಾ ಸಮಿತಿ ಸಂಚಾಲಕರಾಗುವ ಸಾಧ್ಯತೆ ಇದೆ.
ಇದುವರೆಗೆ ಆ ಹುದ್ದೆಯಲ್ಲಿ ಬಸವರಾಜ ಬೊಮ್ಮಾಯಿ ಇದ್ದರು. ಇತ್ತೀಚಿಗೆ ಅವರು ಅಧಿಕಾರದಿಂದ ನಿರ್ಗಮಿಸಿದ್ದಾರೆ. ಆದ್ದರಿಂದ ಆ ಹುದ್ದೆ ತೆರವಾಗಿದೆ. ಅದಕ್ಕೆ ನೇಮಕ ನಡೆಸುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಸಮರ್ಥರ ಶೋಧದಲ್ಲಿ ತೊಡಗಿದೆ. 2021 ರಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ನೇಮಿಸಲಾಗಿದ್ದು ಕರ್ನಾಟಕ ಈ ಸಮಿತಿಯಲ್ಲಿ ಮುಂದುವರಿಯುವುದರಿಂದ ಮತ್ತು ಹಣಕಾಸು ಖಾತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿರುವುದರಿಂದ ಅವರನ್ನೇ ಈ ಸ್ಥಾನಕ್ಕೆ ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಹಣಕಾಸು ಸಚಿವರು ಆಗಿದ್ದರು. ಆದರೆ ಜಿಎಸ್ಟಿ ಮಂಡಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಸಚಿವ ಕೃಷ್ಣ ಬೈರೇಗೌಡ ಅವರನ್ನು ನಿಯೋಜನೆ ಮಾಡಿದ್ದರು. ನಂತರ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಜಿಎಸ್ಟಿ ಮಂಡಳಿಗೆ ನಿಯೋಜಿಸಿದ್ದರು. ನಂತರ ಬೊಮ್ಮಾಯಿ ಮುಖ್ಯಮಂತ್ರಿ ಆದ್ದರಿಂದ ತಾವೇ ಅದರ ಸದಸ್ಯರಾದರು. ಆಮೇಲೆ ಜಿ ಎಸ್ ಟಿ ದರ ನಿಗದಿ ಸಮಿತಿಯ ಸಂಚಾಲಕರಾಗಿ ನೇಮಕಗೊಂಡರು. ಈ ಸಲ ಸಹಜವಾಗಿ ಸಿದ್ದರಾಮಯ್ಯ ಸಮಿತಿಯ ಸಂಚಾಲಕರಾಗುವ ಸಾಧ್ಯತೆ ಇದೆ. ಈ ಮೊದಲಿನಂತೆ ಅವರು ಸಚಿವ ಕೃಷ್ಣಭೈರೇಗೌಡ ಅಥವಾ ಬೇರೆ ಯಾವುದೇ ಸಚಿವರನ್ನು ನಿಯೋಜನೆ ಮಾಡಿದರೆ ಅಧ್ಯಕ್ಷ ಸ್ಥಾನ ತಪ್ಪುವ ಸಾಧ್ಯತೆ ಇದೆ. ಆದ್ದರಿಂದ ಸಿದ್ದರಾಮಯ್ಯ ಅವರೇ ಸಂಚಾಲಕರಾಗುವ ಸಾಧ್ಯತೆ ಹೆಚ್ಚಾಗಿದೆ.