ಬೆಂಗಳೂರು:
ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಖಾಲಿ ಇರುವ 58 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಕಾಲಮಿತಿಯ ಒಳಗೆ ಕ್ರಮಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಪ್ರತಿಭಾವಂತ ಶಿಕ್ಷಕರು ಇಲಾಖೆಯ ಶಕ್ತಿ. ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡರೂ, ಅದು ತಾತ್ಕಾಲಿಕ ಪರಿಹಾರವಷ್ಟೆ. ಅದಕ್ಕಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲೇಬೇಕಿದೆ. ಹಂತಹಂತವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಸೂಚನೆ ಹೊರಡಿಸಿದ್ದ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಆಯ್ಕೆಯಾದ 13,351 ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗಿತ್ತು. ಕೆಲವರು ಮತ್ತೆ ಕೋರ್ಟ್ ಮೊರೆ ಹೋಗಿದ್ದು, ಸ್ಥಳ ನಿಯೋಜನೆ ಆದೇಶ ನೀಡಲು ವಿಳಂಬವಾಗಿದೆ. ಕಾನೂನು ನೆರವು ಪಡೆದು ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ಪಠ್ಯಪುಸ್ತಕ ವಿಷಯದಲ್ಲಿ ಮಕ್ಕಳ ಹಿತಾಸಕ್ತಿಗೆ ಪೂರಕವಾಗಿ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಕಾಲಕ್ಕೆ ತಕ್ಕಂತೆ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡುವ ಚಿಂತನೆ ನಡೆದಿದೆ. ಇದೇ ಶೈಕ್ಷಣಿಕ ವರ್ಷದಲ್ಲಿ ಕೆಲ ಪಾಠಗಳನ್ನು ಪಠ್ಯಪುಸ್ತಕಗಳಿಂದ ಕೈಬಿಡುತ್ತಿರುವುದು ಪಠ್ಯ ಕೇಸರಿಕರಣಕ್ಕೆ ತಡೆ ಎಂದು ಭಾವಿಸಬಾರದು. ಈ ಕುರಿತು ತಜ್ಞರು ಅಧಿಕಾರಿಗಳ ಸಲಹೆ ಪಡೆಯಲಾಗಿದೆ’ ಎಂದರು.