ಬೆಳಗಾವಿ: ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಸರಕಾರದ ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಅದನ್ನು ಸಮರ್ಪಕವಾಗಿ ನಡೆಸಿ. ಇನ್ನೂ ಎಲ್ಲೆಲ್ಲಿ ಸಾಧ್ಯವಿದೆ ಎಂದು ಪರಿಶೀಲಿಸಿ ಆದ್ಯತೆಯ ಮೇಲೆ ಆರಂಭಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬುಧವಾರ ಮಹಾನಗರ ಪಾಲಿಕೆಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ನಗರದಲ್ಲಿ ಆರಂಭಿಸಲಾಗಿರುವ ಆರು ಇಂದಿರಾ ಕ್ಯಾಂಟೀನ್ ಗಳು ಯಾವ ರೀತಿ ನಡೆಸಲಾಗುತ್ತದೆ ಎಂದು ಪ್ರಶ್ನಿಸಿದ ಅವರು, ಬಸ್ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಜನರಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ನಿರ್ದೇಶನ ನೀಡಿದರು. ಹಿಂಡಲಗಾ, ವೈಭವ ನಗರ ಮತ್ತಿತರ ಕಡೆ ಕ್ಯಾಂಟೀನ್ ಆರಂಭಿಸಿ. ಮಹಿಳೆಯರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಬೇಕು. ಇನ್ನು ಮುಂದೆ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖೆಯ ಹೆಚ್ಚಾಗಲಿದ್ದು, ಅವರಿಗೆ ಸರಿಯಾಗಿ ಊಟ ಸಿಗುವಂತೆ ನೋಡಿಕೊಳ್ಳಿ. ನಾನು ಕುಟುಂಬ ಸಮೇತ ಅನೀರಿಕ್ಷಿತ ಭೇಟಿ ನೀಡುತ್ತೇನೆ, ಊಟವನ್ನೂ ಮಾಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಗರದಲ್ಲಿ ಎಲ್ಲ ಕಡೆಯೂ ಎಲ್.ಇ.ಡಿ. ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಕೆಲವು ಕಡೆಗಳಲ್ಲಿ ಕಡಿಮೆ ಸಾಮರ್ಥ್ಯದ ದೀಪ ಅಳವಡಿಸಿರುವುದರಿಂದ ಸಮರ್ಪಕವಾಗಿ ಬೆಳಕು ದೊರಕುತ್ತಿಲ್ಲ. ಸಾಮರ್ಥ್ಯವನ್ನು ಹೆಚ್ಚಿಸಬೇಕು. ಸ್ಮಾರ್ಟ್ ಸಿಟಿ ಎಂದು ಕರೆಯಲಾಗುವ ಬೆಳಗಾವಿಯಲ್ಲಿ ಬೆಳಕು ಮೂಡಿಸಿ. ಕೇವಲ ಹಳೆಯ ಬಲ್ಬ ಬದಲಿಸುವದಲ್ಲ, ಬಲ್ಬ್ ಇಲ್ಲದಲ್ಲಿ ಹೊಸ ಬಲ್ಬ್ ಹಾಕಿ ಕತ್ತಲು ಹೋಗಲಾಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಾಲ್ಕು ಕಡೆಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಕೂಡಲೇ ಪ್ರಸ್ತಾವ ಸಿದ್ಧಪಡಿಸಬೇಕು. ಸರಕಾರದಿಂದ ಅಗತ್ಯವಿರುವ ಅನುಮೋದನೆ ಕೊಡಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ವಸತಿ ಯೋಜನೆ ಸೇರಿದಂತೆ ಯಾವುದೇ ಯೋಜನೆಯ ಸೌಲಭ್ಯಗಳನ್ನು ಕಲ್ಪಿಸುವಾಗ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯ ವಾರ್ಡುಗಳನ್ನು ಏಕೆ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದರು. ಏನನ್ನು ಕೇಳಿದರೂ ಕೇವಲ ಉತ್ತರ, ದಕ್ಷಿಣ ಎನ್ನುತ್ತೀರಿ. ಗ್ರಾಮೀಣದ 2 ವಾರ್ಡಗೆ ಏಕೆ ಅನ್ಯಾಯ? ಹೀಗೆ ಮಾಡುವುದಾದರೆ 2 ವಾರ್ಡ್ಗಳನ್ನು ಗ್ರಾಮ ಪಂಚಾಯತಿ ಗೆ ಬಿಟ್ಟು ಕೊಡಿ, ನಾವು ಅಭಿವೃದ್ಧಿ ಮಾಡಿಕೊಳ್ಳುತ್ತೇವೆ ಎಂದು ಅವರು ಖಾರವಾಗಿ ಹೇಳಿದರು.
ನಿರಂತರ ನೀರು ಯೋಜನೆ ಮಹತ್ವದ ಯೋಜನೆಯಾಗಿದ್ದು, ಸಾರ್ವಜನಿಕರು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು. ಕೆಯುಡಬ್ಲ್ಯುಎಸ್ ಅಧಿಕಾರಿಗಳು ಎಲ್ ಆ್ಯಂಡ್ ಟಿಯವರಿಗೆ ಸರಿಯಾಗಿ ಸಹಕಾರ ಕೊಡುತ್ತಿಲ್ಲ. ತಾಂತ್ರಿಕ ಕಾರಣಗಳಿಂದ ಎಲ್ ಅಂಡ್ ಟಿ ಕಂಪೆನಿಗೆ ದಂಡ ವಿಧಿಸುವುದು ಸಮಂಜಸವಲ್ಲ ಎಂದರು. ಇದಕ್ಕಾಗಿ ಪ್ರತ್ಯೇಕ ಸಭೆ ಕರೆದು ಕಾಮಗಾರಿಗಳ ಸಮರ್ಪಕವಾಗಿ ಅನುಷ್ಠಾನಕ್ಕೆ ಪ್ರಯತ್ನಿಸೋಣ ಎಂದು ಹಟ್ಟಿಹೊಳಿ ಹೇಳಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಶಾಸಕರಾದ ಅಭಯ ಪಾಟೀಲ, ಆಸೀಫ್ ಸೇಠ್, ಮಹಾಪೌರರಾದ ಶೋಭಾ ಸೋಮನಾಚೆ, ಉಪ ಮಹಾಪೌರರಾದ ರೇಷ್ಮಾ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಕೆಯುಐಡಿಎಫ್ ಸಿ ಜಂಟಿ ನಿರ್ದೇಶಕರಾದ ಪದ್ಮಾ ಮತ್ತಿತರರು ಉಪಸ್ಥಿತರಿದ್ದರು.