ಭುವನೇಶ್ವರ:
ಬಾಲೇಶ್ವರ್ನಲ್ಲಿ ಸಂಭವಿಸಿದ ರೈಲು ದುರಂತ ಕುರಿತಂತೆ ಸಿಬಿಐ ಸೋಮವಾರ ತನಿಖೆ ಆರಂಭಿಸಿದೆ. 10 ಸದಸ್ಯರ ತಂಡ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು.
ಖುರ್ದಾ ರೋಡ್ ವಿಭಾಗದ ಡಿಆರ್ಎಂ ರಿಂತೇಶ್ ರೇ ಅವರು, ‘ಸಿಬಿಐ ತಂಡ ತನಿಖೆ ಆರಂಭಿಸಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ’ ಎಂದರು. ರೈಲ್ವೆ ಮಂಡಳಿಯು ಭಾನುವಾರ ಅಪಘಾತದ ತನಿಖೆಯ ಹೊಣೆಯನ್ನು ಸಿಬಿಐಗೆ ಒಪ್ಪಿಸಿತ್ತು.
ಮೃತರ ಸಂಖ್ಯೆ 278ಕ್ಕೆ ಏರಿಕೆ
ಈ ಮಧ್ಯೆ ರೈಲ್ವೆ ಅಪಘಾತದಲ್ಲಿ ಗಾಯಗೊಂಡಿದ್ದ ಮೂವರು ಮೃತಪಟ್ಟಿದ್ದು, ಮೃತರ ಸಂಖ್ಯೆ 278ಕ್ಕೆ ಏರಿದೆ. ಒಟ್ಟು 1,100 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ರಿಂತೇಶ್ ರೇ ತಿಳಿಸಿದ್ದಾರೆ.
ಮೃತರ ಪೈಕಿ 177 ಜನರ ಗುರುತು ಪತ್ತೆಯಾಗಿದ್ದು, ಇನ್ನೂ 101 ಜನರ ಗುರುತು ಪತ್ತೆಯಾಗಬೇಕಿದೆ. ಶವಗಳನ್ನು ವಿವಿಧ ಆರು ಆಸ್ಪತ್ರೆಗಳಲ್ಲಿ ವೈಜ್ಞಾನಿಕ ಕ್ರಮದಲ್ಲಿ ರಕ್ಷಿಸಿಡಲಾಗಿದೆ ಎಂದು ತಿಳಿಸಿದ್ದಾರೆ.
ನಾಪತ್ತೆಯಾದವರ ವಿವರ ಸಂಗ್ರಹಿಸಲು ರೈಲ್ವೆ ಇಲಾಖೆಯು ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸಗಢ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿಗೆ ಸಿಬ್ಬಂದಿಯನ್ನು ಕಳುಹಿಸಿದೆ.