ಹಾವೇರಿ:
ಹಾವೇರಿಯಲ್ಲಿ ಆರಂಭವಾಗಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ(ಜನವರಿ 6)ದಿಂದ ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.
ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದ್ದು, ಹಾವೇರಿ-ಹುಬ್ಬಳ್ಳಿ ರಸ್ತೆಯ ಶ್ರೀ ಅಜ್ಜಯ್ಯ ದೇವಸ್ಥಾನದ ಎದುರು ವೇದಿಕೆ ಸಿದ್ಧವಾಗಿದ್ದು, ಅಕ್ಷರ ಜಾತ್ರೆಗೆ ಲಕ್ಷಾಂತರ ಜನ ಭೇಟಿ ನೀಡಲಿದ್ದಾರೆ.
ಹುತಾತ್ಮ ಮಹದೇವ ಮೈಲಾರ ಮಹಾದ್ವಾರ ನಿಜಶರಣ ಅಂಬಿಗರ ಚೌಡಯ್ಯ ಮಂಟಪದ ಸಮೀಪ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ಶುಕ್ರವಾರ ಬೆಳಗ್ಗೆ 7 ಗಂಟೆಗೆ ರಾಷ್ಟ್ರಧ್ವಜಾರೋಹಣ ನೇರವೇರಿಸಲಿದ್ದಾರೆ. ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಸಾಹಿತ್ಯ ಪರಿಷತ್ನ ಧ್ವಜಾರೋಹಣ ಮಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ನಾಡಧ್ವಜಾರೋಹಣ ಮಾಡಿ ಅಕ್ಷರ ಜಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ನಂತರ ಬೆಳಗ್ಗೆ 7:30ಕ್ಕೆ ಸಮ್ಮೇಳನಾಧ್ಯಕ್ಷ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಅವರನ್ನು ಭವ್ಯ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಗುವುದು.
ಬೆಳಿಗ್ಗೆ 10:30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಸುನೀಲಕುಮಾರ, ಬಿ.ಸಿ.ಪಾಟೀಲ್, ಬಿ.ಸಿ.ನಾಗೇಶ, ಸಂಸದ ಶಿವಕುಮಾರ ಉದಾಸಿ, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಸತಿ ವ್ಯವಸ್ಥೆ
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅಂದಾಜು 17400 ಅತಿಥಿಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿದೆ. ನುಡಿಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಬರುವ ಪೊಲೀಸ್ ಸಿಬ್ಬಂದಿಗೆ 1620, ಮಾಧ್ಯಮದವರಿಗೆ 400, ಕಲಾವಿದರಿಗೆ 1000, ಪರಿಷತ್ ಪದಾಧಿಕಾರಿಗಳು ಮತ್ತು ಸಿಬ್ಬಂದಿಗೆ 1,249, ಪರಿಷತ್ ಸದಸ್ಯರಿಗೆ 9,095, ಚಾಲಕರಿಗೆ 300 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.
ಸಮ್ಮೇಳನದಲ್ಲಿ ಭದ್ರತೆ ಮತ್ತು ಸುಗಮ ಸಂಚಾರ ನಿರ್ವಹಣೆಗಾಗಿ ಸುಮಾರು 12,000 ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕರನ್ನು ನಿಯೋಜಿಸಲಾಗಿದೆ. ಸಂದರ್ಶಕರು ಸ್ಥಳವನ್ನು ತಲುಪಲು ಮತ್ತು ಪಾರ್ಕಿಂಗ್ ಸ್ಲಾಟ್ಗಳನ್ನು ಹುಡುಕಲು ಕ್ಯೂಆರ್ ಕೋಡ್ಗಳನ್ನು ಪರಿಚಯಿಸಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ ಆವರಣದ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
Jana Jeevala > Local News > ಶುಕ್ರವಾರದಿಂದ ಹಾವೇರಿಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 86th All India Kannada Sahitya Sammelna at Haveri from Friday
ಶುಕ್ರವಾರದಿಂದ ಹಾವೇರಿಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 86th All India Kannada Sahitya Sammelna at Haveri from Friday
Jana Jeevala05/01/2023
posted on
