ನವದೆಹಲಿ: ಪಾಕಿಸ್ತಾನದ ಐಎಸ್ಐ (ISI) ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಗಳ ಬೆಂಬಲದೊಂದಿಗೆ ಭಾರತದಲ್ಲಿ ಭೀಕರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂಟು ಮಂದಿ ಶಂಕಿತರನ್ನು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ.
ದೆಹಲಿಯ ಕೆಂಪು ಕೋಟೆ ಸೇರಿದಂತೆ ಪ್ರಮುಖ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಲು ಇವರು ಯೋಜಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಗಾರ್ಮೆಂಟ್ ಉತ್ಪಾದನಾ ಘಟಕಗಳಲ್ಲಿ ಅಡಗಿದ್ದ ಆರು ಮಂದಿ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಮಿಜಾನುರ್ ರೆಹಮಾನ್, ಮೊಹಮ್ಮದ್ ಶಬತ್, ಉಮರ್, ಮೊಹಮ್ಮದ್ ಲಿಟನ್, ಮೊಹಮ್ಮದ್ ಶಾಹಿದ್ ಮತ್ತು ಮೊಹಮ್ಮದ್ ಉಜ್ಜಲ್ ಎಂದು ಗುರುತಿಸಲಾಗಿದೆ.
ಇವರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಇವರಲ್ಲಿ ಒಬ್ಬ ಬಾಂಗ್ಲಾದೇಶದ ಪ್ರಜೆಯೂ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಚಟುವಟಿಕೆಗಳಿಗೆ ಜಾಲವೊಂದು ಯೋಜನೆ ರೂಪಿಸುತ್ತಿದೆ ಎಂಬ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ನಂತರ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶೋಧದ ಸಮಯದಲ್ಲಿ, ಅವರ ಬಳಿಯಿಂದ ಡಜನ್ಗಟ್ಟಲೆ ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಜಾಲದ ವ್ಯಾಪ್ತಿ ಮತ್ತು ಸಂಭವನೀಯ ವಿದೇಶಿ ಸಂಪರ್ಕಗಳನ್ನು ಖಚಿತಪಡಿಸಿಕೊಳ್ಳಲು ವಿಶ್ಲೇಷಿಸಲಾಗುತ್ತಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಗುಂಪು ಪಾಕಿಸ್ತಾನದ ಐಎಸ್ಐ ಮತ್ತು ಬಾಂಗ್ಲಾದೇಶ ಮೂಲದ ಕೆಲವು ಸಂಘಟನೆಗಳೊಂದಿಗೆ ಸಂಪರ್ಕದಲ್ಲಿತ್ತು.
ಕೇಂದ್ರೀಯ ಸಂಸ್ಥೆಗಳು ತನಿಖೆಗೆ ಸಹಾಯ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.
ಸುಧಾರಿತ ಸ್ಫೋಟಕ ಸಾಧನ (ಐಇಡಿ) ಆಧಾರಿತ ದಾಳಿ ನಡೆಸಲು ಎಲ್ಇಟಿ ಪ್ರಯತ್ನಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದವು.
ಶಂಕಿತರು ನಕಲಿ ಆಧಾರ್ ಕಾರ್ಡ್ಗಳನ್ನು ಬಳಸುತ್ತಿದ್ದರು. ಇವರಿಂದ ಒಟ್ಟು 8 ಮೊಬೈಲ್ ಫೋನ್ಗಳು ಮತ್ತು 16 ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡು ಪೊಲೀಸರು ಈ ಶಂಕಿತರನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಲಷ್ಕರ್-ಎ-ತೊಯ್ಬಾ ಸಂಚು
ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯು ದೆಹಲಿಯ ಕೆಂಪು ಕೋಟೆ ಮತ್ತು ಚಾಂದಿನಿ ಚೌಕ್ನ ದೇವಾಲಯ ಸೇರಿದಂತೆ ದೇಶದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಐಇಡಿ ಸ್ಫೋಟ ನಡೆಸಲು ಸಂಚು ರೂಪಿಸಿದೆ ಎಂಬ ಗುಪ್ತಚರ ಮಾಹಿತಿ ಬೆನ್ನಲ್ಲೇ ಈ ಬಂಧನ ನಡೆದಿದೆ.
ಫೆಬ್ರವರಿ 6ರಂದು ಪಾಕಿಸ್ತಾನದ ಇಸ್ಲಾಮಾಬಾದ್ನ ಮಸೀದಿಯೊಂದರಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ (ಅಲ್ಲಿ 31 ಮಂದಿ ಸಾವನ್ನಪ್ಪಿದ್ದರು) ಸೇಡು ತೀರಿಸಿಕೊಳ್ಳಲು ಈ ದಾಳಿಗೆ ಯೋಜಿಸಲಾಗಿತ್ತು ಎಂದು ಹೇಳಲಾಗಿದೆ. ವಿಶೇಷವೆಂದರೆ, ಇಸ್ಲಾಮಾಬಾದ್ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (IS) ಹೊತ್ತುಕೊಂಡಿದ್ದರೂ, ಲಷ್ಕರ್ ಸಂಘಟನೆಯು ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಹಳೆಯ ಘಟನೆಗಳ ನಂಟು
ನವೆಂಬರ್ 10, 2025 ರಂದು ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ನಡೆದಿದ್ದ ಭೀಕರ ಕಾರು ಸ್ಫೋಟದ ನೆನಪು ಮಾಸುವ ಮುನ್ನವೇ ಈ ಸಂಚು ಬಯಲಾಗಿದೆ. ಅಂದು ನಡೆದಿದ್ದ ಸ್ಫೋಟದಲ್ಲಿ 12 ಜನರು ಸಾವಿಗೀಡಾಗಿದ್ದರು. ಫರಿದಾಬಾದ್ನ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಉಮರ್ ಮೊಹಮ್ಮದ್ ಎಂಬಾತ ಸ್ಫೋಟಕ ತುಂಬಿದ್ದ ಕಾರನ್ನು ಚಲಾಯಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬೀಳುವ ಭೀತಿಯಲ್ಲಿ ಸ್ಫೋಟ ಸಂಭವಿಸಿತ್ತು. ಆ ದಿನವೇ ಹರಿಯಾಣದ ಫರಿದಾಬಾದ್ನಲ್ಲಿ 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈಗ ಬಂಧಿತರಾಗಿರುವ ಎಂಟು ಮಂದಿ ಶಂಕಿತರಿಗೂ ಇಂತಹದ್ದೇ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ಎಸಗುವ ಉದ್ದೇಶವಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ದೆಹಲಿ ಸೇರಿದಂತೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.


