ಮಂಡ್ಯ : ಮಂಡ್ಯ ಜಿಲ್ಲೆಯ ಬಂಡೂರು ತಳಿಯ ಟಗರು ದಾಖಲೆ ಬೆಲೆಗೆ ಮಾರಾಟವಾಗಿದೆ. 20 ಸಾವಿರ ರೂ.ಗಳಿಗೆ ಖರೀದಿ ಮಾಡಿದ್ದ ಬಂಡೂರು ಟಗರನ್ನು ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ಬರೋಬ್ಬರಿ 1.48 ಲಕ್ಷ ರೂ.ಗಳನ್ನು ಕೊಟ್ಟು ಖರೀದಿ ಮಾಡಿದ್ದಾರೆ.
ಬಂಡೂರು ತಳಿಯ ಟಗರು ಮಾಂಸಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಇದರ ಮಾಂಸಕ್ಕೆ ಎಲ್ಲಿಲ್ಲದ ಬೇಡಿಕೆ. ಈ ಟಗರಿನ ವಯಸ್ಸು ಕೇವಲ 8 ತಿಂಗಳ ಟಗರು. ಕಿರುಗಾವಲು ಗ್ರಾಮದ ಉಲ್ಲಾಸ ಗೌಡ ಎಂಬವರಿಗೆ ಸೇರಿದೆ. 8 ತಿಂಗಳ ಹಿಂದೆ ಉಲ್ಲಾಸ ಅವರಮನೆಯಲ್ಲಿ ಈ ಟಗರು ಮರಿ ಜನಿಸಿತ್ತು. ನಂತರ ಕೆಲವು ದಿನದಲ್ಲೇ ಟಿ.ನರಸೀಪುರದ ಮೂಲದವರಿಗೆ 20 ಸಾವಿರಕ್ಕೆ ಟಗರು ಮಾರಾಟ ಮಾಡಿದ್ದರು. ಆದರೆ, ಅದೇ ಟಗರನ್ನು ಉಲ್ಲಾಸ ಅವರ ತಂದೆ ಮನೋಹರ ಅವರು ವಾಪಸ್ ಬೇಕು ಎಂದು ಹೇಳಿದ್ದರು. ಹೀಗಾಗಿ, ಮಾರಾಟ ಮಾಡಿದ ಟಗರನ್ನು ವಾಪಸ್ 50 ಸಾವಿರ ರೂ.ಗೆ ಖರೀದಿಸಿದ್ದರು.
ಇದಾದ ಕೆಲವು ದಿನಗಳ ನಂತರ ಉಲ್ಲಾಸ ಅವರಿಂದ ಶಿವಮೊಗ್ಗ ಮೂಲದ ಉದ್ಯಮಿ ಜವಾದ್ ಎಂಬವರು ಅದೇ ಟಗರನ್ನು ಬರೋಬ್ಬರಿ 1.48 ಲಕ್ಷ ರೂ.ಗಳಿಗೆ ಖರೀದಿಸಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ ಟಗರನ್ನು ಹಸ್ತಾಂತರ ಮಾಡಿದ್ದಾರೆ. ಉಲ್ಲಾಸ ಅವರ ತಂದೆ ಮನೋಹರ್ ಅವರಿಗೆ ಸನ್ಮಾನ ಮಾಡಿ ಜವಾದ್ ಅವರು 1.48 ಲಕ್ಷ ರೂ. ಹಣ ನೀಡಿ ಟಗರು ಕೊಂಡೊಯ್ದಿದ್ದಾರೆ. ಇದನ್ನು ಮಾಂಸಕ್ಕಿಂತ ಹೆಚ್ಚಾಗಿ ಬಂಡೂರು ತಳಿ ಅಭಿವೃದ್ಧಿಗಾಗಿ ಈ ಟಗರು ದಾಖಲೆ ಬೆಲೆಗೆ ಖರೀದಿಸಿದ್ದಾಗಿ ಜವಾದ್ ಹೇಳಿದ್ದಾರೆ.