ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ಸತತ ಆರು ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದಾರೆ.
ಇದರಲ್ಲಿ ಒಂದೇ ಓವರ್ನಲ್ಲಿ ಐದು ಸಿಕ್ಸರ್ಗಳ ಸಾಧನೆಯೂ ಸೇರಿದೆ.
45 ಎಸೆತಗಳಲ್ಲಿ 95 ರನ್ ಗಳಿಸಿದ ಪರಾಗ್ ಕೇವಲ ಐದು ರನ್ ಅಂತರದಿಂದ ಶತಕದಿಂದ ವಂಚಿತರಾದರು. ನಾಯಕನ ಆಟವಾಡಿದ ರಿಯಾನ್ ಇನಿಂಗ್ಸ್ನಲ್ಲಿ ಎಂಟು ಸಿಕ್ಸರ್ ಹಾಗೂ ಆರು ಬೌಂಡರಿಗಳು ಸೇರಿದ್ದವು.
ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಿಯಾನ್, ‘ರಿಯಲ್ ಪವರ್ ಹಿಟ್ಟರ್’ ಎಂಬುದನ್ನು ಸಾಬೀತು ಮಾಡಿದ್ದಾರೆ.
ಮೊಯಿನ್ ಅಲಿ ಎಸೆದ ಇನಿಂಗ್ಸ್ನ 13ನೇ ಓವರ್ನಲ್ಲಿ ಸತತ ಐದು ಸಿಕ್ಸರ್ಗಳನ್ನು ಬಾರಿಸಿದ ರಿಯಾನ್, ಅಬ್ಬರಿಸಿದರು. ಬಳಿಕ ವರುಣ್ ವರುಣ್ ಅವರ ಓವರ್ನಲ್ಲಿ ತಾವು ಎದುರಿಸಿದ ಮೊದಲನೇ ಚೆಂಡನ್ನು ರಿವರ್ಸ್ ಸ್ವೀಪ್ ಮೂಲಕ ರಿಯಾನ್, ಸಿಕ್ಸರ್ಗಟ್ಟಿದರು. ಆ ಮೂಲಕ ಸತತ ಆರು ಎಸೆತಗಳಲ್ಲಿ ಸಿಕ್ಸರ್ಗಳ ಸಾಧನೆ ಮಾಡಿದ್ದಾರೆ.
ರಿಯಾನ್ ದಿಟ್ಟ ಹೋರಾಟದ ಹೊರತಾಗಿಯೂ ಕೋಲ್ಕತ್ತ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ಒಂದು ರನ್ ಅಂತರದ ಸೋಲಿಗೆ ಶರಣಾಯಿತು. 207 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ, ಎಂಟು ವಿಕೆಟ್ ನಷ್ಟಕ್ಕೆ 205 ರನ್ ಗಳಿಸಲಷ್ಟೇ ಸಾಧ್ಯವಾಯಿತು.