ಕಾರವಾರ : ನಗರದ ಕಠಿಣಕೋಣ ಭಾಗದಲ್ಲಿ ಭಾನುವಾರ ಅಪರೂಪದ ಘಟನೆಯೊಂದು ನಡೆದಿದ್ದು, ಇಲ್ಲಿನ ನಿವಾಸಿಯೊಬ್ಬರ ಮನೆಯ ಆವರಣದಲ್ಲಿ ಒಟ್ಟಿಗೆ ಆರು ಹೆಬ್ಬಾವುಗಳು ಪತ್ತೆಯಾಗಿವೆ.
ವಿಜಯ ತಳೇಕರ ಎಂಬವರ ಮನೆಯ ಆವರಣದಲ್ಲಿ ಕಾಂಕ್ರೀಟ್ ಕಮಾನು ನಿರ್ಮಾಣಕ್ಕಾಗಿ ಇರಿಸಲಾಗಿದ್ದ ಕಬ್ಬಿಣದ ಸಾಮಗ್ರಿಗಳ ಮಧ್ಯೆ ಈ ಬೃಹತ್ ಹಾವುಗಳು ಅಡಗಿಕೊಂಡಿದ್ದವು. ಒಂದೇ ಕಡೆ ಇಷ್ಟೊಂದು ಸಂಖ್ಯೆಯ ಹೆಬ್ಬಾವುಗಳನ್ನು ಕಂಡ ಸ್ಥಳೀಯರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಕೂಡಲೇ ಈ ಬಗ್ಗೆ ಅರಣ್ಯ ಇಲಾಖೆಯ ಗಸ್ತು ವನಪಾಲಕ ಹಾಗೂ ಉರಗ ರಕ್ಷಕ ಗೋಪಾಲ ನಾಯ್ಕ ಅವರಿಗೆ ಮಾಹಿತಿ ನೀಡಲಾಯಿತು.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅವರು, ರಾಜೇಶ ನಾಯ್ಕ ಅವರ ನೆರವಿನೊಂದಿಗೆ ಸುಮಾರು 8ರಿಂದ 12 ಅಡಿ ಉದ್ದವಿದ್ದ ಎಲ್ಲಾ ಆರು ಹೆಬ್ಬಾವುಗಳನ್ನು ಅತ್ಯಂತ ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ನಂತರ ಈ ಹಾವುಗಳನ್ನು ಯಾರಿಗೂ ತೊಂದರೆಯಾಗದಂತೆ ಕಾಡಿನ ಸುರಕ್ಷಿತ ಪ್ರದೇಶಕ್ಕೆ ಬಿಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಗೋಪಾಲ ನಾಯ್ಕ ಅವರು, ಬೇಸಿಗೆಯ ಆರಂಭವು ಹಾವುಗಳ ಮಿಲನ ಕ್ರಿಯೆಯ ಸಮಯವಾಗಿರುತ್ತದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಹೆಣ್ಣು ಹಾವನ್ನು ಹುಡುಕುತ್ತಾ ಗಂಡು ಹಾವುಗಳು ಬರುವುದು ನೈಸರ್ಗಿಕ ಪ್ರಕ್ರಿಯೆ. ಇದೇ ಕಾರಣಕ್ಕೆ ಒಂದೇ ಕಡೆ ಇಷ್ಟೊಂದು ಸಂಖ್ಯೆಯ ಹೆಬ್ಬಾವುಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.


