5, 8ನೇ ತರಗತಿಗೆ ರಾಜ್ಯಮಟ್ಟದ ಪರೀಕ್ಷೆ
ಬೆಂಗಳೂರು :
ಶಾಲಾ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಳ ಮಾಡುವ ಉದ್ದೇಶದಿಂದ 5 ಮತ್ತು 8ನೇ ತರಗತಿಗೆ ರಾಜ್ಯಮಟ್ಟದ ಪರೀಕ್ಷೆ ನಡೆಸುವ ಕುರಿತು ಚಿಂತನೆಯನ್ನು ನಡೆಸಲಾಗುತ್ತಿದೆ.
8ನೇ ತರಗತಿವರೆಗೂ ಯಾವುದೇ ಮಕ್ಕಳನ್ನು ಅನುತ್ತೀರ್ಣ ಮಾಡುವಂತಿಲ್ಲ ಎಂಬ ನಿಯಮವು ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಇದ್ದು, ಇದರಿಂದ ವಿದ್ಯಾರ್ಥಿಗಳ ಕಲಿಕೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. 10ನೇ ತರಗತಿ ಪರೀಕ್ಷೆಯಲ್ಲಿ ಇದರ ನೇರ ಪರಿಣಾಮವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಇನ್ನು ಇದು ಪಬ್ಲಿಕ್ ಪರೀಕ್ಷೆಯಲ್ಲ. ಆದರೆ, ಕಲಿಕಾ ಮೌಲ್ಯಮಾಪನ ಮಾಡುವುದಕ್ಕಾಗಿ ಪರೀಕ್ಷೆ ನಡೆಸಲಾಗುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳ ಮೂಲಕ ಕೊಂಡೊಯ್ಯಲು ಸಹಕಾರಿಯಾಗಲಿದೆ.
ಕರ್ನಾಟಕದಲ್ಲಿ 2004-05ನೇ ಶೈಕ್ಷಣಿಕ ಸಾಲಿನವರೆಗೂ 7ನೇ ತರಗತಿ ಮಕ್ಕಳಿಗೂ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತಿದ್ದು, ಅದಾದ ಬಳಿಕ ಪಬ್ಲಿಕ್ ಪರೀಕ್ಷೆ ನಡೆಸುತ್ತಿಲ್ಲ. ಇನ್ನು 5 ಮತ್ತು 8ನೇ ತರಗತಿಗೆ ಪರೀಕ್ಷೆ ನಡೆಸುವ ಕುರಿತಂತೆ ಈ ಹಿಂದೆಯೂ ಹಲವು ಬಾರಿ ಇಲಾಖೆ ಹಂತದಲ್ಲಿ ಚರ್ಚೆಯಾಗಿದೆ.