ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಭಯೋತ್ಪಾದಕರು ಬಳಸುತ್ತಿದ್ದ ಭೂಗತ ಅಡಗುತಾಣವನ್ನು ಭದ್ರತಾ ಪಡೆಗಳು ಭೇದಿಸಿದ್ದು, ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಿದ್ದಾರೆ.
ಸುಮಾರು ಎರಡು ವಾರಗಳ ಹಿಂದೆ ಪಹಲ್ಗಾಮ್ನಲ್ಲಿ ನಡೆದ ಭೀಕರ ದಾಳಿಯಲ್ಲಿ 26 ನಾಗರಿಕರು ಸಾವಿಗೀಡಾದ ನಂತರ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಪೂಂಚ್ನ ಸುರನ್ಕೋಟ್ನಲ್ಲಿ ಭಾನುವಾರ ಸಂಜೆ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ಅಡಗುತಾಣದಲ್ಲಿ ಐದು ಸ್ಫೋಟಕ ಸಾಧನಗಳು, ಎರಡು ವೈರ್ಲೆಸ್ ಸೆಟ್ಗಳು ಮತ್ತು ಮೂರು ಕಂಬಳಿಗಳು ಪತ್ತೆಯಾಗಿವೆ. ಭಯೋತ್ಪಾದಕರಿಗಾಗಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಪೂಂಚ್ ಮತ್ತು ರಾಜೌರಿ ಜಮ್ಮು ಮತ್ತು ಕಾಶ್ಮೀರದ ಅನೇಕ ಭಯೋತ್ಪಾದಕ ದಾಳಿಗಳು ಮತ್ತು ಎನ್ಕೌಂಟರ್ಗಳ ಕೇಂದ್ರಬಿಂದುವಾಗಿದೆ. ಭಯೋತ್ಪಾದಕರ ಅಡಗುತಾಣವನ್ನು ಭೇದಿಸಿದ ಗಂಟೆಗಳ ನಂತರ, ಪಾಕಿಸ್ತಾನ ಸೇನೆಯು ಭಾನುವಾರ ರಾತ್ರಿ ಪೂಂಚ್ ಮತ್ತು ಇತರ ವಲಯಗಳಲ್ಲಿನ ನಿಯಂತ್ರಣ ರೇಖೆಯಾದ್ಯಂತ ತನ್ನ “ಅಪ್ರಚೋದಿತ” ಗುಂಡಿನ ದಾಳಿಯನ್ನು ಪುನರಾರಂಭಿಸಿತು.