ಪಾಟ್ನಾ :ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ಇದು ಒಂದು ಮಹತ್ವದ ದಿನವಾಗಿದೆ. ರಾಜ್ಯದ ಒಟ್ಟು 243 ಸ್ಥಾನಗಳ ಪೈಕಿ ಎನ್ಡಿ ಮೈತ್ರಿಕೂಟವು 202 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ ಅಥವಾ ಗೆಲುವು ಸಾಧಿಸಿದೆ. ಆದಾಗ್ಯೂ, ಕೆಲವು ಅಭ್ಯರ್ಥಿಗಳಿಗೆ ಸ್ಪರ್ಧೆಯು ಕೊನೆಯ ಕ್ಷಣದವರೆಗೂ ರೋಚಕವಾಗಿತ್ತು. ಸಂದೇಶ್ ಕ್ಷೇತ್ರದ ಸ್ಪರ್ಧೆಯು ಬಿಹಾರದಲ್ಲಿ ಅತ್ಯಂತ ರೋಚಕವಾಗಿತ್ತು. ಯಾಕೆಂದರೆ, ಅಲ್ಲಿ ಜೆಡಿ(ಯು) ಅಭ್ಯರ್ಥಿ ರಾಧಾಚರಣ ಸಹಾ ಅವರು ಆರ್ಜೆಡಿಯ ದೀಪು ಸಿಂಗ್ ಅವರನ್ನು ಕೇವಲ 27 ಮತಗಳ ತೀರಾ ಕಡಿಮೆ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ.
ಅತ್ಯಂತ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ ಐದು ಪ್ರಮುಖ ಅಭ್ಯರ್ಥಿಗಳ ವಿವರ :
ಸಂದೇಶ: ಜೆಡಿ (ಯು) ನ ರಾಧಾ ಚರಣ್ ಸಹಾ ಅವರು ಆರ್ಜೆಡಿಯ ದೀಪು ಸಿಂಗ್ ಅವರನ್ನು ಕೇವಲ 27 ಮತಗಳ ಅಂತರದಿಂದ ಸೋಲಿಸಿದರು. ಸಹಾ 80,598 ಮತಗಳನ್ನು (43.99%) ಪಡೆದರು, ಆದರೆ ಸಿಂಗ್ 80,571 ಮತಗಳನ್ನು (43.97%) ಪಡೆದರು.
ರಾಮಗಢ: ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಾಯಕ ಸತೀಶಕುಮಾರ ಸಿಂಗ್ ಯಾದವ್ ಅವರು ಬಿಜೆಪಿಯ ಅಶೋಕಕುಮಾರ ಸಿಂಗ್ ಅವರನ್ನು ಕೇವಲ 30 ಮತಗಳ ಅಂತರದಿಂದ ಸೋಲಿಸಿದರು, ಇದು ಬಿಹಾರದಲ್ಲಿ ಪಕ್ಷದ ಏಕೈಕ ಗೆಲುವು. ಯಾದವ್ 72,689 ಮತಗಳನ್ನು (37.29%) ಮತ್ತು ಸಿಂಗ್ 72,659 ಮತಗಳನ್ನು (37.29%) ಪಡೆದರು.
ಅಗಿಯಾನ್ : ಬಿಜೆಪಿಯ ಮಹೇಶ ಪಾಸ್ವಾನ್ ಅವರು ಸಿಪಿಐ (ಎಂಎಲ್) (ಎಲ್) ನ ಶಿವಪ್ರಕಾಶ ರಂಜನ್ ಅವರನ್ನು ಕೇವಲ 95 ಮತಗಳ ಅಂತರದಿಂದ ಸೋಲಿಸಿ ವಿಜಯಶಾಲಿಯಾದರು. ಪಾಸ್ವಾನ್ 69,412 ಮತಗಳನ್ನು (45.2%) ಮತ್ತು ರಂಜನ್ 69,317 ಮತಗಳನ್ನು (45.14%) ಪಡೆದರು.
ಢಾಕಾ: ಆರ್ಜೆಡಿಯ ಫೈಸಲ್ ರೆಹಮಾನ್ ಅವರು ಬಿಜೆಪಿಯ ಪವನಕುಮಾರ ಜೈಸ್ವಾಲ್ ಅವರನ್ನು 178 ಮತಗಳ ಅಲ್ಪ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾದರು. ರೆಹಮಾನ್ 112,727 ಮತಗಳನ್ನು (45.72%) ಗಳಿಸಿದರೆ, ಜೈಸ್ವಾಲ್ 112,549 ಮತಗಳನ್ನು (45.64%) ಗಳಿಸಿದರು.
ಫೋರ್ಬ್ಸ್ಗಂಜ್: ಕಾಂಗ್ರೆಸ್ ಅಭ್ಯರ್ಥಿ ಮನೋಜ ಬಿಶ್ವಾಸ ಅವರು ಬಿಜೆಪಿಯ ವಿದ್ಯಾ ಸಾಗರ ಕೇಶರಿ ಅವರನ್ನು 221 ಮತಗಳ ಅಂತರದಿಂದ ಸೋಲಿಸಿದರು. ಬಿಶ್ವಾಸ್ 120,114 ಮತಗಳನ್ನು (47.77%) ಗಳಿಸುವಲ್ಲಿ ಯಶಸ್ವಿಯಾದರು, ಮತ್ತು ಕೇಶರಿ 119,893 ಮತಗಳನ್ನು (47.68%) ಪಡೆದರು.
ರಾತ್ರಿ 10:00 ಗಂಟೆಯ ಹೊತ್ತಿಗೆ, ಎನ್ಡಿಎ 243 ಸ್ಥಾನಗಳಲ್ಲಿ 202 ಸ್ಥಾನಗಳಲ್ಲಿ ಮುಂದಿದೆ ಅಥವಾ ಗೆಲುವು ಮುನ್ನಡೆ ಸಾಧಿಸಿದೆ. ಬಿಜೆಪಿ 90 ಸ್ಥಾನಗಳಲ್ಲಿ ಗೆಲುವಿನತ್ತ ಹೋಗಿದ್ದರೆ ಜೆಡಿಯು 85 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಮತ್ತೊಂದೆಡೆ, ಮಹಾಘಟಬಂಧನ್ ಕೇವಲ 35 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸುವ ಮೂಲಕ ನೀರಸ ಪ್ರದರ್ಶನ ನೀಡಿತು, ಇದು 2020 ರ ಚುನಾವಣೆಯಲ್ಲಿ ಅದರ ಸಂಖ್ಯೆಗಿಂತ ಬಹಳ ಕಡಿಮೆಯಾಗಿದೆ. ಆರ್ಜೆಡಿ 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು ಮತ್ತು ಕಾಂಗ್ರೆಸ್ ಪ್ರಸ್ತುತ ಆರು ಸ್ಥಾನಗಳಲ್ಲಿ ಮಾತ್ರ ಮುಂದಿದೆ. ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷವು ತನ್ನ ಮೊದಲ ರಾಜಕೀಯ ಸ್ಪರ್ಧೆಯಲ್ಲಿ ಶೂನ್ಯ ಸಾಧನೆ ಮಾಡಿತು.


