ಬೆಂಗಳೂರು : ಕರ್ನಾಟಕ ಶಿಕ್ಷಣ ಇಲಾಖೆ ಈ ವರ್ಷ ನಿರ್ಧಾರ ತೆಗೆದುಕೊಂಡು ಈಗಾಗಲೇ ಎರಡು ದಿನ ನಡೆಸಿದ್ದ 5, 8, 9ನೇ ತರಗತಿ ಮೌಲ್ಯಾಂಕನ ಪರೀಕ್ಷೆಗಳಿಗೆ ಮತ್ತೆ ತಡೆ ನೀಡಲಾಗಿದೆ. ಈಗ ತಡೆ ನೀಡಿರುವುದು ಸುಪ್ರೀಂಕೋರ್ಟ್.
5, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಇಲಾಖೆ ನಡೆಸುತ್ತಿದ್ದ ಬೋರ್ಡ್ ಎಕ್ಸಾಮ್ ಮತ್ತೆ ಗೊಂದಲದ ಗೂಡಾಗಿದೆ. ಈಗಾಗಲೇ ಮಾರ್ಚ್ 11, 12 ರಂದು ಪರೀಕ್ಷೆ ನಡೆದಿತ್ತು. ಎರಡು ಪರೀಕ್ಷೆ ಮುಗಿದ ನಡುವೆಯೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬೇಲಾ ತ್ರಿವೇದಿ ನೇತೃತ್ವದ ನ್ಯಾಯಪೀಠ ಪರೀಕ್ಷೆಗೆ ತಡೆ ನೀಡಿದೆ. ತಡೆ ನೀಡಿದ ಬೆನ್ನಲ್ಲೇ ಪರೀಕ್ಷೆಯನ್ನು ಮುಂದಿನ ಆದೇಶದವರೆಗೆ ಮುಂದೂಡುವುದಾಗಿ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಆದರೆ ಈ ನಡುವೆ ವಿದ್ಯಾರ್ಥಿಗಳು ಹಾಗೂ ಪೋಷಕರು ತಲೆ ಮೇಲೆ ಕೈಯೊತ್ತು ಕೂರುವಂತಾಗಿದೆ.
ಇತ್ತೀಚೆಗಷ್ಟೆ ಈ ಮೂರು ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರ ರದ್ದುಗೊಳಿಸಿದ್ದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ಮತ್ತು ಪಾಲಕರ ಸಂಘಟನೆ (ರುಪ್ಸಾ) ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಇವರ ಅರ್ಜಿ ಅಂಗೀಕರಿಸಿದ ಸರ್ವೋಚ್ಚ ನ್ಯಾಯಲಯವು, ಹೈಕೋರ್ಟ್ ವಿಭಾಗೀಯ ಪೀಠದ ಮಧ್ಯಂತರ ಆದೇಶವನ್ನು ಬದಿಗೆ ಸರಿಸಿ, ಮುಖ್ಯ ಮೇಲ್ಮನವಿಗಳನ್ನು ತ್ವರಿತವಾಗಿ ತೀರ್ಮಾನಿಸುವಂತೆ ವಿಭಾಗೀಯ ಪೀಠಕ್ಕೆ ಸೂಚಿಸಿದೆ.
ತಮ್ಮ ಮುಂದೆ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಗಳು ಹಾಗೂ ಹೈಕೋರ್ಟ್ನ ಆದೇಶಗಳನ್ನು ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯ, ಇಂಥದ್ದೇ ವಿಷಯಕ್ಕೆ ಸಂಬಂಧಿಸಿ 2023ರಲ್ಲಿ ಹೊರಡಿಸಿದ ಮತ್ತೊಂದು ಏಕ ಸದಸ್ಯ ಪೀಠದ ಆದೇಶದ ಅಂಶಗಳನ್ನು ಹಾಲಿ ಪ್ರಕರಣದಲ್ಲಿ ಹೈಕೋರ್ಟ್ನ ಏಕ ನ್ಯಾಯಾಧೀಶರು ಪರಿಗಣಿಸಿದ್ದಾರೆ ಎಂದು ಗಮನಿಸಿತು. ವಿಭಾಗೀಯ ಪೀಠದಲ್ಲಿ ಮುಖ್ಯ ಮೇಲ್ಮನವಿಗಳನ್ನು ಬಾಕಿ ಇರುವುದರಿಂದ, ಈ ಹಂತದಲ್ಲಿ ಪ್ರಕರಣದ ಅರ್ಹತೆಯ ಬಗ್ಗೆ ನಾವು ಯಾವುದೇ ಆದೇಶ ನೀಡುವುದಿಲ್ಲ. ಆದರೆ ಅಧಿಸೂಚನೆಗಳು ಆರ್ಟಿಇ ಕಾಯ್ದೆಯ ಸೆಕ್ಷನ್ 30 ಅನ್ನು ಉಲ್ಲಂಘಿಸಿ ಅನಗತ್ಯ ತೊಡಕು ಸೃಷ್ಟಿಸಿದೆ ಎಂದು ಹೇಳಿತು. ಇದರಿಂದ ಶಿಕ್ಷಣ ನೀತಿ ಮೇಲೆ ಅನಗತ್ಯ ಗೊಂದಲ ಸೃಷ್ಟಿಯಾಗಿ, ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅತೃಪ್ತಿ ಹೊರಹಾಕಿತು.
ಹೈಕೋರ್ಟ್ ನ ನ್ಯಾಯಾಧೀಶರು ಈಗಾಗಲೇ ಸರ್ಕಾರಿ ಅಧಿಸೂಚನೆಗಳನ್ನು ರದ್ದುಗೊಳಿಸಿರುವುದರಿಂದ, ಹೈಕೋರ್ಟ್ನ ವಿಭಾಗೀಯ ಪೀಠ ಪರೀಕ್ಷೆಗಳನ್ನು ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಬಾರದಿತ್ತು ಎಂದೂ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು. ವಾದ ಮಂಡನೆ ವೇಳೆ ಈ ಪರೀಕ್ಷೆಗಳು ನೈಜ ಪರೀಕ್ಷೆಗಳೇನಲ್ಲ. ಬದಲಿಗೆ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಸಂಗ್ರಹಾತ್ಮಕ ಮೌಲ್ಯಮಾಪನ ಎಂದು ಕರ್ನಾಟಕ ಸರ್ಕಾರ ಪ್ರತಿಪಾದಿಸಿದೆ. ಆದರೆ ಈ ವಾದ ನ್ಯಾಯಾಲಯಕ್ಕೆ ತೃಪ್ತಿ ತರಲಿಲ್ಲ. ಪರೀಕ್ಷೆಗಳನ್ನು ಬೋರ್ಡ್ ನಡೆಸುತ್ತಿರುವುದರಿಂದ ಹೆಸರಿನ ಬದಲಾವಣೆ ಹೆಚ್ಚೇನೂ ವ್ಯತ್ಯಾಸ ತರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ ಸುಪ್ರೀಂ.
ಸುಪ್ರೀಂಕೋರ್ಟ್ ಹೇಳಿದ್ದೇನು?
ಸುಪ್ರೀಂನಲ್ಲಿ ಏನಾಗಿದೆ ಎನ್ನುವುದರಿಂದ ಪ್ರಭಾವಿತರಾಗದೇ, ಕರ್ನಾಟಕ ಸರ್ಕಾರ ಸಲ್ಲಿಸಿದ ಮುಖ್ಯ ಮೇಲ್ಮನವಿಗಳನ್ನು ಅರ್ಹತೆಗಳ ಆಧಾರದಲ್ಲಿ ತ್ವರಿತವಾಗಿ ನಿರ್ಧರಿಸಬೇಕು ಎಂದು ಹೈಕೋರ್ಟ್ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ವಿಭಾಗೀಯ ಪೀಠದಲ್ಲಿ ಮುಖ್ಯ ಮೇಲ್ಮನವಿ ಬಾಕಿ ಇದ್ದು, ಈ ಹಂತದಲ್ಲಿ ಪ್ರಕರಣದ ಅರ್ಹತೆ ಬಗ್ಗೆ ಆದೇಶ ನೀಡುವುದಿಲ್ಲ. ಅಧಿಸೂಚನೆಯು ಆರ್ಟಿಇ ಆಕ್ಟ್ ಸೆಕ್ಷನ್ 30 ರ ಉಲ್ಲಂಘನೆ ಆಗುತ್ತದೆ. ಶಿಕ್ಷಣ ನೀತಿ ಮೇಲೆ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.